ಬೆಂಗಳೂರು: ಪೂರ್ಣ ವೇತನ ನೀಡಬೇಕು ಎಂಬುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನಿಗಮಗಳ ನೌಕರರ ಫೆಡರೇಶನ್ ನವೆಂಬರ್ 5 ರಂದು ಮುಷ್ಕರಕ್ಕೆ ಕರೆ ನೀಡಿದೆ.
ನಾಳೆ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕರು ಮುಷ್ಕರ ಕೈಗೊಂಡಿದ್ದಾರೆ. ಇದರಿಂದಾಗಿ ಸಾರಿಗೆ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸಾರಿಗೆ ನಿಗಮಗಳಲ್ಲಿ ಬಸ್ ಗಳ ಕಾರ್ಯಾಚರಣೆ ಯಥಾಸ್ಥಿತಿಗೆ ಬರುವವರೆಗೆ ಪೂರ್ಣ ವೇತನ ನೀಡಬೇಕು. ಕಾರ್ಮಿಕರ ಮೇಲೆ ಹೆಚ್ಚುತ್ತಿರುವ ಕಿರುಕುಳ, ದಾಳಿ ನಿಲ್ಲಿಸಬೇಕು. ಕೋವಿಡ್ ಪಾಸಿಟಿವ್ ಬಂದವರಿಗೆ ಕ್ವಾರಂಟೈನ್ ಮತ್ತು ಚಿಕಿತ್ಸೆ ಪಡೆದ ಅವಧಿಯಲ್ಲಿ ವೇತನ ಸಹಿತ ರಜೆ ನೀಡಬೇಕು. ಕಾರ್ಮಿಕರ ಗಳಿಕೆ ರಜೆಗಳನ್ನು ಅವರ ಖಾತೆಗೆ ವಾಪಸ್ ನೀಡಬೇಕು. ಕೊರೋನಾನಾದಿಂದ ಮೃತಪಟ್ಟವರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.