ಬೆಂಗಳೂರು: ಆರನೇ ವೇತನ ಆಯೋಗ ಜಾರಿ ಬೇಡಿಕೆಯೊಂದಿಗೆ ಹೋರಾಟ ಕೈಗೊಂಡಿರುವ ಸಾರಿಗೆ ನೌಕರರು ಇಂದು ಕೂಡ ಮುಷ್ಕರ ಮುಂದುವರಿಸಲಿದ್ದಾರೆ.
ಹೋರಾಟವನ್ನು ತೀವ್ರಗೊಳಿಸಲು ಸಾರಿಗೆ ನೌಕರರು ಮುಂದಾಗಿದ್ದು ಇಂದು ಕುಟುಂಬದವರೊಂದಿಗೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ತಟ್ಟೆ, ಲೋಟ ಚಳವಳಿ ನಡೆಸಲಿದ್ದಾರೆ.
ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಈ ಬಗ್ಗೆ ಮಾಹಿತಿ ನೀಡಿದ್ದು, ಸೋಮವಾರ ಮುಷ್ಕರ 6ನೇ ದಿನಕ್ಕೆ ಕಾಲಿರಿಸಿದೆ. ಸರ್ಕಾರ ಮಾರ್ಚ್ ತಿಂಗಳ ವೇತನವನ್ನು ನೀಡಿಲ್ಲ. ಹೀಗಾಗಿ ಹೋರಾಟ ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಮುಷ್ಕರದಿಂದಾಗಿ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದೇ ಜನರಿಗೆ ಸಮಸ್ಯೆಯಾಗಿದೆ. ಇನ್ನು ಕೆಲವು ಕಡೆ ಅಲ್ಪ ಪ್ರಮಾಣದಲ್ಲಿ ಬಸ್ ಸಂಚಾರ ಶುರುವಾಗಿದೆ.