ಬೆಂಗಳೂರು: ನಮ್ಮ ಸಮಾಜದಲ್ಲಿ ಅಂತರ್ಗತವಾಗಿರುವ ಜಾತಿ ವ್ಯವಸ್ಥೆ, ಸಾಮಾಜಿಕ ಕಟ್ಟುಪಾಡುಗಳ ಹೀನ ಮನಸ್ಥಿತಿಯನ್ನು ಮರ್ಯಾದೆಗೇಡು ಹತ್ಯೆಯಂತಹ ಘಟನೆಗಳು ಪ್ರತಿಫಲಿಸುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು, ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮರ್ಯಾದೆಗೇಡು ಹತ್ಯೆಯಂತಹ ಪ್ರಕರಣಗಳ ವಿಚಾರದಲ್ಲಿ ನಮ್ಮ ಸರ್ಕಾರ ಕಾನೂನಾತ್ಮಕವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಕೆಲವು ವಾರಗಳಲ್ಲಿ ರಾಜ್ಯದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣಗಳು ನಮ್ಮೆಲ್ಲರ ಮನ ಕಲಕಿವೆ. ಜಾತಿ ವ್ಯವಸ್ಥೆ, ಕಟ್ಟುಪಾಡುಗಳ ಹೀನ ಮನಸ್ಥಿತಿಯನ್ನು ಇಂತಹ ಘಟನೆಗಳು ಪ್ರತಿಫಲಿಸುತ್ತವೆ ಎಂದು ತಿಳಿಸಿದ್ದಾರೆ.
ಮರ್ಯಾದೆಗೇಡು ಹತ್ಯೆ ಪ್ರಕರಣದ ತನಿಖೆ, ವಿಚಾರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಲಾಗುವುದು. ಜಾತಿಗ್ರಸ್ತ ಸಮಾಜದಲ್ಲಿ ಪರಿವರ್ತನೆ, ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದ್ದು, ಮನುಷ್ಯ ಚಂದ್ರನ ಮೇಲೆ ಕಾಲಿರಿಸಿದ್ದರೂ ದಲಿತರಿಗೆ ದೇವಾಲಯಗಳಲ್ಲಿ, ಮನೆಗಳಲ್ಲಿ ಕಾಲಿರಿಸಲು ಅವಕಾಶ ನೀಡದಂತಹ ಆಚರಣೆ ಸಂಪ್ರದಾಯ ನಮ್ಮಲ್ಲಿವೆ. ಇವನ್ನು ಮೀರಲು ಮಾನವಿಯತೆ ವಿಚಾರಪರತೆ ದಾರಿಯಾಗಿದೆ. ಜಾಗೃತಿಯೇ ಅಸ್ತ್ರವಾಗಿದೆ ಎಂದಿದ್ದಾರೆ.
ಜಾತಿ ಸಂಕೋಲೆಯಿಂದ ಸಮಾಜ ಬಿಡುಗಡೆಗೊಳಿಸಲು ಸಮಾಜ ಸುಧಾರಕರ ಆಶಯಗಳನ್ನು ಪ್ರಚುರಪಡಿಸುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ರಚನಾತ್ಮಕ ಕಾರ್ಯಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.