ಶಾಲೆಗಳಲ್ಲಿ ಮಕ್ಕಳಿಗೆ ಓದುವ ಕುರಿತಂತೆ ಒತ್ತಡ ಹೇರಬಾರದೆಂದು ಮನಃಶಾಸ್ತ್ರಜ್ಞರು ಈ ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬರುತ್ತಿದ್ದಾರೆ. ಆದರೆ ಕೆಲವೊಂದು ಶಾಲೆಗಳು ಅನಗತ್ಯವಾಗಿ ಹೆಚ್ಚಿನ ಹೋಮ್ ವರ್ಕ್ ನೀಡುವ ಮೂಲಕ ವಿದ್ಯಾರ್ಥಿಗಳ ಹೊರೆಯನ್ನು ಹೆಚ್ಚಿಸುತ್ತಾರೆ. ಈ ರೀತಿ ಹೋಂ ವರ್ಕ್ ಒತ್ತಡಕ್ಕೆ ಒಳಗಾಗಿದ್ದ 9ನೇ ತರಗತಿ ವಿದ್ಯಾರ್ಥಿಯೊಬ್ಬ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ತಿರುವರುರ್ ಜಿಲ್ಲೆಯ ಪೆರಲಂನಲ್ಲಿ ಈ ಘಟನೆ ನಡೆದಿದ್ದು 14 ವರ್ಷದ ಸಂಜಯ್ ಮೃತ ವಿದ್ಯಾರ್ಥಿಯಾಗಿದ್ದಾನೆ. ಖಾಸಗಿ ಶಾಲೆಯ ಒಂದರಲ್ಲಿ 9ನೇ ತರಗತಿಯಲ್ಲಿ ಈತ ವ್ಯಾಸಂಗ ಮಾಡುತ್ತಿದ್ದು, ಹೋಮ್ ವರ್ಕ್ ಕಾರಣಕ್ಕೆ ಸಾಕಾಗಿ ಹೋಗಿದ್ದ ಎನ್ನಲಾಗಿದೆ. ಹೀಗಾಗಿ ಶಾಲೆಯನ್ನು ಬದಲಿಸುವಂತೆ ತನ್ನ ಪೋಷಕರಿಗೆ ಪದೇ ಪದೇ ಹೇಳುತ್ತಿದ್ದ ಎಂದು ತಿಳಿದುಬಂದಿದೆ.
ಯಾವಾಗ ತನ್ನ ಪೋಷಕರು ಶಾಲೆ ಬದಲಿಸಲು ನಿರಾಕರಿಸಿದರೋ ಇನ್ನಷ್ಟು ಒತ್ತಡಕ್ಕೊಳಗಾದ ಸಂಜಯ್ ಆಗಸ್ಟ್ 22ರ ಸೋಮವಾರ ಬೆಳಗ್ಗೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಈತನ ಕಿರುಚಾಟ ಕೇಳಿ ಪೋಷಕರು ಧಾವಿಸಿ ಬಂದಿದ್ದಾರೆ. ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಆತನನ್ನು ತಿರುವುರ್ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.