
ಪೋರ್ಚುಗೀಸ್‌ನ ಸಣ್ಣ ಪಟ್ಟಣವಾದ ಸಾವೊ ಲೊರೆಂಕೊ ಡಿ ಬೈರೊದಲ್ಲಿನ ಡಿಸ್ಟಿಲರಿಯಲ್ಲಿ ಈ ಘಟನೆ ನಡೆದಿದೆ. 600,000 ಗ್ಯಾಲನ್‌ಗಳಷ್ಟು ಮದ್ಯವನ್ನು ಸಾಗಿಸುತ್ತಿದ್ದ ಬ್ಯಾರೆಲ್‌ಗಳು ಅನಿರೀಕ್ಷಿತವಾಗಿ ಕುಸಿದು ಬಿದ್ದಿದೆ. ಈ ವೇಳೆ ಕೆಂಪು ವೈನ್ ಪ್ರವಾಹದಂತೆ ರಸ್ತೆ ತುಂಬೆಲ್ಲಾ ಹರಿದಿದೆ.
ಸದ್ಯ, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸುಮಾರು 2,000 ಜನಸಂಖ್ಯೆಯನ್ನು ಹೊಂದಿರುವ ಸೋ ಲೊರೆಂಕೊ ಡಿ ಬೈರೊ ಎಂಬ ಪುಟ್ಟ ಪಟ್ಟಣದಲ್ಲಿ ಕಡಿದಾದ ಬೆಟ್ಟದ ಕೆಳಗೆ ರಸ್ತೆಯ ತುಂಬೆಲ್ಲಾ ಕೆಂಪು ವೈನ್ ನದಿಯಂತೆ ಹರಿಯುವುದನ್ನು ವಿಡಿಯೋದಲ್ಲಿ ನೋಡಬಹುದು.
ಈ ಸೋರಿಕೆಯು ಎಷ್ಟು ದೊಡ್ಡದಾಗಿದೆ ಎಂದರೆ, ಚೆಲ್ಲಿದ ವೈನ್ ಒಲಿಂಪಿಕ್ ಗಾತ್ರದ ಈಜುಕೊಳವನ್ನು ತುಂಬಿರಬಹುದು. ಇದು ಪರಿಸರ ಎಚ್ಚರಿಕೆಯನ್ನು ಸಹ ಉಂಟುಮಾಡಿದೆ.
ಸೆರ್ಟಿಮಾ ನದಿಗೆ ವೈನ್ ಸೇರುವುದನ್ನು ತಡೆಯುವ ಸಲುವಾಗಿ ಅಧಿಕಾರಿಗಳು ಕಾರ್ಯಪ್ರವೃತ್ತರಾದರು. ಅನಾಡಿಯಾ ಅಗ್ನಿಶಾಮಕ ಇಲಾಖೆಯು ಪ್ರವಾಹವನ್ನು ಸ್ಥಗಿತಗೊಳಿಸಿತು. ಅದನ್ನು ನದಿಯಿಂದ ದೂರಕ್ಕೆ ಸ್ಥಳಾಂತರಿಸಿತು. ಡಿಸ್ಟಿಲರಿ ಬಳಿಯ ನಿವಾಸದ ನೆಲಮಾಳಿಗೆಯಲ್ಲಿ ವೈನ್ ಪ್ರವಾಹ ಹರಿಯಿತು ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.