ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳನ್ನು ಕೊಂದು ಅರಣ್ಯಪ್ರದೇಶದಲ್ಲಿ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಮ ಪಂಚಾಯಿತಿಯ ಇಬ್ಬರು ಸದಸ್ಯರು, ಕಾರ್ಯದರ್ಶಿ, ಬಿಲ್ ಕಲೆಕ್ಟರ್ ಮತ್ತು ನಾಯಿಗಳನ್ನು ಹಿಡಿದು ಸಾಯಿಸಿದ್ದ ಮೈಸೂರಿನ ನಾಲ್ವರನ್ನು ಬಂಧಿಸಲಾಗಿದೆ.
ಬೀದಿನಾಯಿಗಳ ಕಾಟ ವಿಪರೀತವಾಗಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಕಂಬದಾಳ್ ಹೊಸೂರು ಹುಣಸೆಕಟ್ಟೆ ಸಮೀಪ ಆಳದ ಗುಂಡಿ ತೆಗೆದು ಜೀವಂತವಾಗಿ ಹೂಳಲಾಗಿತ್ತು. ಪ್ರಾಣಿದಯಾ ಸಂಘದವರಿಗೆ ಈ ವಿಚಾರ ಗೊತ್ತಾಗಿ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಹಾಗೂ ಪಶುಪಾಲನಾ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ನಾಯಿಗಳನ್ನು ಜೀವಂತವಾಗಿ ಸಮಾಧಿ ಮಾಡಿದ 9 ಮಂದಿಯನ್ನು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.