ಹೈದರಾಬಾದ್: ಮನೆಯೊಳಗೆ ನುಗ್ಗಿದ ಬೀದಿನಾಯಿ ಹೊರಹಾಕಲು ವ್ಯಕ್ತಿಯೊಬ್ಬ ತುರ್ತು ಸಹಾಯವಾಣಿ 100ಕ್ಕೆ ಕರೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಬೀದಿನಾಯಿಯೊಂದು ಮನೆಯೊಳಗೆ ನುಗ್ಗಿದ ಪರಿಣಾಮ ಕುಟುಂಬ ಸದಸ್ಯರು ಕಂಗಾಲಾಗಿದ್ದಾರೆ. ಬೀದಿನಾಯಿ ಹೊರಹಾಕಲು ಬೇರೆ ದಾರಿ ಕಾಣದೇ ವ್ಯಕ್ತಿಯೋರ್ವ ತುರ್ತು ಸಹಾಯವಾಣಿಗೆ ಕರೆ ಮಾಡಿದ್ದಾರೆ. ತಕ್ಷಣ ಪೊಲೀಸರು ಅಪಾಯದಲ್ಲಿರುವವರನ್ನು ರಕ್ಷಿಸಲು ಸ್ಥಳಕ್ಕಾಗಮಿಸಿ ವಿಚಾರಿಸಿದ್ದಾರೆ.
ನಾಯಿ ಹೊರಹಾಕಲು ತುರ್ತು ಸಹಾಯವಾಣಿಗೆ ಕರೆ ಮಾಡಿ, ಸಹಾಯವಾಣಿ ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಪೊಲೀಸ್ ಸಿಬ್ಬಂದಿ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೀದಿ ನಾಯಿ ಮನೆಯೊಳಗೆ ನುಗ್ಗಿದ್ದು, ಅದು ನಮ್ಮನ್ನು ಕಚ್ಚಬಹುದು ಎಂಬ ಭಯದಿಂದ ರಕ್ಷಣೆಗಾಗಿ ಸಹಾಯವಾಣಿಗೆ ಕರೆ ಮಾಡಿದ್ದಾಗಿ ವ್ಯಕ್ತಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಪೊಲೀಸರು ಹಾಗೂ ವ್ಯಕ್ತಿ ನಡುವೆ ವಾಗ್ವಾದ ನಡೆದಿದೆ. ಇನ್ನೊಂದೆಡೆ ನಾಯಿಯೊಂದು ಮನೆಯೊಳಗೆ ಟೇಬಲ್ ಪಕ್ಕದಲ್ಲಿ ಕುಳಿತಿರುವ ದೃಶ್ಯವೂ ಸೆರೆಯಾಗಿದೆ.
ವೈರಲ್ ಆಗಿರುವ ವಿಡಿಯೋ ಬಗ್ಗೆ ಕೆಲವರು ವ್ಯಕ್ತಿಯ ಪರವಾಗಿ ಕಮೆಂಟ್ ಮಾಡಿದ್ದಾರೆ. ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನೇರವಾಗಿ ಮನೆಗೆ ನುಗ್ಗಿ ದಾಳಿ ಮಾಡಿದರೆ ಜನರು ಏನು ಮಾಡಬೇಕು? ಹಾಗಾಗಿ ವ್ಯಕ್ತಿ ಮಾಡಿದ್ದು ಸರಿ ಇದೆ ಎಂದಿದ್ದಾರೆ. ಇನ್ನು ಕೆಲವರು ತುರ್ತು ಸಹಾಯವಾಣಿಯನ್ನು ಹೀಗೆ ದುರುಪಯೋಗ ಮಾಡಿಕೊಂಡಿದ್ದು ಸರಿಯಲ್ಲ ಎಂದು ವಾದಿಸಿದ್ದಾರೆ.