ಕೋಲಾರ: ಬೀದಿನಾಯಿಗಳ ಹಾವಳಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕಿಂಚಿತ್ತೂ ಗಮನ ಹರಿಸಿದಂತೆ ಕಾಣುತ್ತಿಲ್ಲ. ಕೋಲಾರದ ಜನತೆಯಂತೂ ಬೀದಿನಾಯಿಗಳ ದಾಳಿಗೆ ಕಂಗಾಲಾಗಿದ್ದಾರೆ. ಮನೆಯಿಂದ ಹೊರಬರಲೂ ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರಡು ದಿನಗಳಲ್ಲಿ ಕೋಲಾರದಲ್ಲಿ 10ಕ್ಕೂ ಹೆಚ್ಚು ಜನರ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ್ದು, ಕಚ್ಚಿ ಗಾಯಗೊಳಿಸಿವೆ. ವೃದ್ಧರು, ಮಹಿಳೆಯರು, ಮಕ್ಕಳ ಸ್ಥಿತಿ ಗಂಭೀರವಾಗಿದೆ. ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೋಲಾರದ ಮಾಲೂರು, ಶ್ರೀನಿವಸಪುರ, ಕೋಲಾರ ನಗರ ಸೇರಿದಂತೆ ವಿವಿಧೆಡೆ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿದ್ದಿದೆ. ಪ್ರತಿ ದಿನ ಬೀದಿನಾಯಿಗಳು ಮಕ್ಕಳು, ಮಹಿಳೆಯರ ಮೇಲೆ ದಾಳಿ ನಡೆಸುತ್ತಿದ್ದು, ಬೀದಿನಾಯಿಗಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಅಧಿಕಾರಿಗಳಿಗೆ ಹೇಳಿ ಹೇಳಿ ರೋಸಿಹೋಗಿದ್ದಾರೆ. ನಾಯಿ ದಾಳಿಗಳಿಂದ ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.