ನಮ್ಮ ದೇಹದಲ್ಲಿ ನಾವು ತಿನ್ನುವ ಆಹಾರ ಪಚನಗೊಂಡು ಗುದನಾಳದ ಮುಖಾಂತರ ಗುದದ್ವಾರದಿಂದ ಹೊರಹೋಗುತ್ತದೆ. ಆಹಾರ ವ್ಯತ್ಯಾಸದಿಂದ ಕೆಲವೊಮ್ಮೆ ಗುದದ್ವಾರ ಹಾಗೂ ಗುದನಾಳದಲ್ಲಿರುವ ರಕ್ತನಾಳಗಳು ಊದಿಕೊಂಡು ಉರಿಯೂತಕ್ಕೆ ಕಾರಣವಾಗುತ್ತದೆ.
ಹೆಚ್ಚಾಗಿ ಯುವ ಪೀಳಿಗೆಯಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಗೆ ಆಧುನಿಕ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಕಾರಣ. ಅನುವಂಶಿಕತೆ, ಯಾವಾಗಲು ಕುಳಿತು ಮಾಡುವ ಕೆಲಸ, ನಾರಿನಂಶವಿಲ್ಲದ ಆಹಾರ ಪದಾರ್ಥಗಳ ಸೇವನೆ, ಬೊಜ್ಜು, ದೇಹದಲ್ಲಿ ನೀರಿನ ಕೊರತೆ ಇದಕ್ಕೆ ಮೂಲ ಕಾರಣವಾಗುತ್ತದೆ.
ಸ್ಟ್ರಾಬೆರಿ ನಿಯಮಿತ ಸೇವನೆ ಕರುಳು ಮತ್ತು ಗುದನಾಳದ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಇನ್ಫ್ಲಾಮೆಟ್ರಿ ಬವೆಲ್ ಡಿಸೀಜ್(ಕರುಳಿನ ಉರಿಯೂತ) ಖಾಯಿಲೆ ವಿಪರೀತ ಅತಿಸಾರ ಮತ್ತು ಆಯಾಸ ಅಲ್ಲದೆ ಹೆಚ್ಚು ನೋವುಂಟು ಮಾಡುತ್ತದೆ. ಈ ಸಮಸ್ಯೆಯನ್ನು ಔಷಧಗಳು ಮತ್ತು ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸಬಹುದು. ಆದರೆ ವಿಜ್ಞಾನಿಗಳ ಅಧ್ಯಯನದ ಪ್ರಕಾರ, ಈ ಖಾಯಿಲೆಗೆ ಸಂಬಂಧಿಸಿದ ಎಲ್ಲಾ ಲಕ್ಷಣಗಳಿಗೆ ಪರಿಹಾರ ಸ್ಟ್ರಾಬೆರಿಯಂತೆ.
ಮ್ಯಾಸಚೂಸೆಟ್ಸ್ ಅಮ್ಹೆರ್ಸ್ಟ್ ಯುನಿವರ್ಸಿಟಿಯ ಹಾಂಗ್ ಜಿಯಾವೊ ಪ್ರಕಾರ, ಜನರ ಆಲಸಿ ಜೀವನ ಮತ್ತು ಆಹಾರದಲ್ಲಿ ಹೆಚ್ಚಿನ ಸಕ್ಕರೆ, ಹೆಚ್ಚಿನ ಕೊಬ್ಬು, ಕಡಿಮೆ ಫೈಬರ್ ಅಂಶ ಇರುವುದೇ ಕರಳು ಮತ್ತು ಗುದನಾಳದ ಉರಿಯೂತಕ್ಕೆ ಪ್ರಮುಖ ಕಾರಣ.
ಸ್ಟ್ರಾಬೆರಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಗಳ ಪ್ರಮಾಣ ಹೆಚ್ಚಿರುತ್ತದೆ. ಈ ಹಣ್ಣಿನ ಸೇವನೆಯಿಂದ ದೇಹ ಕಾಯಿಲೆ ವಿರೋಧಿ ಶಕ್ತಿ ಪಡೆಯುತ್ತದೆ.
ವಿಟಮಿನ್ ಸಿ ಸ್ಟ್ರಾಬೆರಿಯಲ್ಲಿರೋದ್ರಿಂದ ಕಣ್ಣುಗಳ ಆರೋಗ್ಯಕ್ಕೆ ಉತ್ತಮ.
ಕ್ಯಾನ್ಸರ್ ಕೋಶಗಳನ್ನು ನಾಶಮಾಡುವ ಫ್ಲಾವೊನೈಡ್, ಫೋಲೇಟ್, ಕೆಮ್ಫೆರೊಲ್ ಅಂಶಗಳು ಸ್ಟ್ರಾಬೆರಿಯಲ್ಲಿರುತ್ತದೆ.
ಇದರಲ್ಲಿ ಹೃದಯಾಘಾತದ ಅಪಾಯವನ್ನ ಕಡಿಮೆ ಮಾಡುವ ಪೊಟ್ಯಾಸಿಯಮ್ ಇದ್ದು, ದೇಹವನ್ನು ಸುಸ್ಥಿತಿಯಲ್ಲಿಡಲು ಸಹಾಯಕ.