ಸಾಮಾಜಿಕ ಜಾಲತಾಣದ ಮೂಲಕ ಪ್ರತಿನಿತ್ಯ ಹಲವು ವಿಷಯಗಳು, ಅಚ್ಚರಿಗಳು ಹೊರಬರ್ತಿರುತ್ತವೆ. ಮೀನಿಗೆ ಸಂಬಂಧಿಸಿದ ಅಂಥದ್ದೇ ಕುತೂಹಲಕಾರಿ ಅಚ್ಚರಿಯ ವಿಷಯ ನೆಟ್ಟಿಗರ ಹುಬ್ಬೇರಿಸಿದೆ. ಹೆಸರಾಂತ ಬ್ಲಾಗರ್ ಟ್ರ್ಯಾಪ್‌ಮ್ಯಾನ್ ಬೆರ್ಮಗುಯಿ ಎಂಬ ಹೆಸರಿನಿಂದ ಕರೆಯಲ್ಪಡುವ ಜೇಸನ್ ಮೋಯ್ಸ್ ಸಾಮಾಜಿಕ ಮಾಧ್ಯಮದಲ್ಲಿ ಮೀನಿನ ಫೋಟೋವನ್ನು ಅಪ್‌ಲೋಡ್ ಮಾಡಿದ್ದು, ಆ ಮೀನಿನ ದೇಹದ ಮೇಲಿರುವ ಗುರುತುಗಳು ಅಚ್ಚರಿಯ ಜೊತೆಗೆ ಕುತೂಹಲ ಮೂಡಿಸಿದೆ.
ಟ್ಯೂನ ಮೀನಿನ ದೇಹದ ಮೇಲೆ ಅಸಾಮಾನ್ಯ ವೃತ್ತಾಕಾರದ ಗಾಯದಂತಹ ಗುರುತುಗಳು ಕಂಡಿವೆ. “ಈ ಟ್ಯೂನ ಮೇಲೆ ಗಂಭೀರವಾದ ಕುಕೀ-ಕಟರ್ ಬೈಟ್ಸ್” ಎಂಬ ಶೀರ್ಷಿಕೆಯೊಂದಿಗೆ ಮೀನಿನ ಮೇಲೆ ಕಚ್ಚಿದ ಗಾಯದ ಗುರುತುಗಳಿರುವ ಫೋಟೋವನ್ನ ಹಂಚಿಕೊಂಡಿದ್ದಾರೆ.
ಗಾಯದಿಂದ ಮೀನಿನ ಹೊಟ್ಟೆಯಲ್ಲಿ ಕನಿಷ್ಠ ಆರು ಕಡೆ ಮಾಂಸದ ತುಂಡುಗಳು ಕಾಣೆಯಾಗಿವೆ. ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಾಗಿನಿಂದ ಹಲವರು ತಮ್ಮದೇ ರೀತಿಯಲ್ಲಿ ಚಿತ್ರವನ್ನ ವಿಶ್ಲೇಷಿಸಿ ಕಮೆಂಟ್ ಮಾಡ್ತಿದ್ದಾರೆ. ಓರ್ವ ಬಳಕೆದಾರರು “ಸ್ಕ್ವಿಡ್ ಕಡಿತದಂತೆ ಕಾಣುತ್ತದೆ” ಎಂದಿದ್ದಾರೆ. ಕೆಲವರು ಚಿತ್ರವು “ಭಯಾನಕ ಚಲನಚಿತ್ರ” ದಿಂದ ನೇರವಾಗಿ ಹೊರಬಂದಿದೆ ಎಂದಿದ್ದಾರೆ. “ನೀರಿನಲ್ಲಿ ಭಯಪಡಲು ಸಾಕಷ್ಟು ವಿಷಯಗಳಿರಲಿಲ್ಲ” ಎಂದು ಮತ್ತೊಬ್ಬರು ಬಣ್ಣಿಸಿದ್ದಾರೆ.
ಚಿತ್ರ ಪೋಸ್ಟ್ ಮಾಡಿರುವ ಬ್ಲಾಗರ್ ಮೋಯ್ಸ್ ಅವರು ಆಗ್ನೇಯ ಆಸ್ಟ್ರೇಲಿಯಾದ ಕರಾವಳಿಯಲ್ಲಿ ಅಸಾಮಾನ್ಯ ಪ್ರಾಣಿಗಳನ್ನು ಸೆರೆಹಿಡಿಯಲು ಹೆಸರುವಾಸಿಯಾಗಿದ್ದಾರೆ. ಚಿತ್ರ ನೋಡಿದ ಹಲವರು ಟ್ಯೂನ ಮೀನಿನ ಮೇಲಾದ ಗಾಯದ ಕಾರಣವನ್ನು ತಿಳಿಯಲು ಕುತೂಹಲ ತೋರಿಸಿದ್ದಾರೆ. ಈ ಬಗ್ಗೆ ವಿವರಿಸಿದ ಬ್ಲಾಗರ್ ಮೋಯ್ಸ್ , ಕುಕೀ-ಕಟರ್ ಶಾರ್ಕ್ ತನ್ನ ಬೇಟೆಯನ್ನು ಬಾಯಿಯಿಂದ ಹೇಗೆ ಕಚ್ಚುತ್ತದೆ ಎಂಬುದನ್ನು ವಿವರಿಸಿದ್ದಾರೆ. ದೊಡ್ಡ ಮೀನು ಮತ್ತು ಸಸ್ತನಿಗಳನ್ನು ಕಚ್ಚಿದ ತಕ್ಷಣ ಕುಕೀ-ಕಟರ್ ಶಾರ್ಕ್ ಕಣ್ಮರೆಯಾಗುತ್ತವೆ ಎಂದು ವಿವರಿಸಿದ್ದಾರೆ.