ಮಂಡ್ಯ ಜಿಲ್ಲೆಯ ಕೊಕ್ಕರೆ ಬೆಳ್ಳೂರು ಹೆಸರೇ ಹೇಳುವಂತೆ ಕೊಕ್ಕರೆಗಳ ನೆಲೆವೀಡು. ಮದ್ದೂರು ತಾಲ್ಲೂಕಿನಲ್ಲಿರುವ ಬೆಳ್ಳೂರು ಗ್ರಾಮ ಬೆಳ್ಳಗಿನ ಕೊಕ್ಕರೆಗಳಿಂದ ಕೊಕ್ಕರೆ ಬೆಳ್ಳೂರು ಆಗಿದೆ.
ಬೇರೆ ಕಡೆಗಳಿಂದ ಇಲ್ಲಿಗೆ ವಲಸೆ ಬರುವ ಹಕ್ಕಿಗಳು ಸಂತಾನೋತ್ಪತ್ತಿ ನಂತರ ತಮ್ಮ ನೆಲೆಗೆ ತೆರಳುತ್ತವೆ. ಪ್ರತಿವರ್ಷ ಚಳಿಗಾಲದಲ್ಲಿ ಹೆಚ್ಚಿನ ಸಂಖ್ಯೆಯ ಪಕ್ಷಿಗಳು ಇಲ್ಲಿಗೆ ಬರುತ್ತವೆ. ಬಿಳಿ ಕೊಕ್ಕರೆಗಳು ಮಾತ್ರವಲ್ಲ, ನಾನಾ ರೀತಿಯ ಪಕ್ಷಿಗಳು, ಕೊಕ್ಕರೆಗಳು ಕೂಡ ಬರುತ್ತವೆ. ಹಾಗಾಗಿ ಚಳಿಗಾಲದಲ್ಲಿ ಬೆಳ್ಳೂರಿಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಪಕ್ಷಿಗಳಿಗೆ ತೊಂದರೆಯಾಗದಂತೆ ದೂರದಿಂದಲೇ ಅವುಗಳನ್ನು ವೀಕ್ಷಿಸುತ್ತಾರೆ.
ಕೊಕ್ಕರೆ ಸೇರಿದಂತೆ ಹಲವು ಪಕ್ಷಿಗಳ ನೆಲೆವೀಡಾದ ಕೊಕ್ಕರೆ ಬೆಳ್ಳೂರು ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತದೆ. ಸ್ವಚ್ಛಂದವಾಗಿ ಪಕ್ಷಿಗಳು ವಿಹರಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಿದ್ದಂತೆ.
ಬೆಂಗಳೂರು-ಮೈಸೂರು ರಸ್ತೆಯ ಸಮೀಪದಲ್ಲೇ ಒಳಗೆ ಪ್ರಯಾಣಿಸಿದರೆ ಸಿಗುವ ಬೆಳ್ಳೂರು, ಪಕ್ಷಿಗಳ ತವರೂರು. ಗ್ರಾಮದೊಂದಿಗೆ ಪಕ್ಷಿಗಳ ಹೆಸರೂ ಸೇರಿ ಕೊಕ್ಕರೆ ಬೆಳ್ಳೂರು ಆಗಿದೆ. ಇಲ್ಲಿನ ಜನ ಪಕ್ಷಿಗಳ ಬಗ್ಗೆ ಹೆಚ್ಚಿನ ಕಾಳಜಿ ತೋರುತ್ತಾರೆ. ಸಾಧ್ಯವಾದರೆ ಒಮ್ಮೆ ಕೊಕ್ಕರೆ ಬೆಳ್ಳೂರಿನ ಹಕ್ಕಿಗಳನ್ನು ಕಣ್ತುಂಬಿಕೊಂಡು ಅವುಗಳ ಕಲರವ ಕೇಳಿ ಬನ್ನಿ.