ಪ್ರತಿ ದಿನ ಕಾರಿನಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಸಾಕಷ್ಟಿದೆ. ಆದ್ರೆ ಕಾರಿನಲ್ಲಿ ಏನು ತೆಗೆದುಕೊಂಡು ಹೋಗ್ಬೇಕು, ಏನನ್ನು ತೆಗೆದುಕೊಂಡು ಹೋಗ್ಬಾರದು ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅನೇಕ ಬಾರಿ ನಮ್ಮ ಬಳಿ ಎಲ್ಲ ದಾಖಲೆ ಇದ್ರೂ ಪೊಲೀಸರು ನಮ್ಮ ಕಾರ್ ಗೆ ಕೈ ಅಡ್ಡ ಹಾಕ್ತಾರೆ. ನಮ್ಮನ್ನು ನಾನಾ ಪ್ರಶ್ನೆ ಕೇಳ್ತಾರೆ. ಅದಕ್ಕೆ ಈ ಕೆಳಗಿನವು ಕಾರಣವಾಗಬಹುದು.
ವಿಚಿತ್ರ ವಾಸನೆ : ನಿಮ್ಮ ಕಾರಿನಿಂದ ಬರುವ ಯಾವುದೇ ಅಸಾಮಾನ್ಯ ವಾಸನೆ ಪೊಲೀಸರನ್ನು ಅನುಮಾನಗೊಳಿಸಬಹುದು. ಮದ್ಯಪಾನ ಮಾಡಿ ವಾಹನ ಚಲಾಯಿಸೋದು ನಿಷೇಧವಾಗಿರುವ ಕಾರಣ ಅದ್ರ ಬಗ್ಗೆ ಪೊಲೀಸರು ಪ್ರಶ್ನೆ ಕೇಳುತ್ತಾರೆ. ದುರ್ವಾಸನೆಯು ನಿಮ್ಮ ಕಾರಿನಲ್ಲಿ ಮೃತದೇಹವನ್ನು ಸಾಗಿಸುವಂತಹ ಅನುಮಾನವನ್ನು ಹುಟ್ಟುಹಾಕುತ್ತದೆ. ಹಾಗಾಗಿ ನಿಮ್ಮ ಕಾರನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಯಾವುದೇ ವಾಸನೆ ಬರದಂತೆ ನೋಡಿಕೊಳ್ಳಿ.
ತೆರೆದ ವೈನ್ ಬಾಟಲಿ : ಭಾರತದ ಬಹುತೇಕ ರಾಜ್ಯಗಳಲ್ಲಿ ಕಾರಿನಲ್ಲಿ ತೆರೆದ ಮದ್ಯದ ಬಾಟಲಿ ಸಾಗಿಸುವಂತಿಲ್ಲ. ಕುಡಿದು ವಾಹನ ಚಲಾಯಿಸುವುದನ್ನು ತಡೆಯುವುದು ಈ ಕಾನೂನುಗಳ ಉದ್ದೇಶವಾಗಿದೆ. ಚಾಲಕ ಮದ್ಯಪಾನ ಮಾಡದಿದ್ದರೂ, ತೆರೆದ ಮದ್ಯದ ಬಾಟಲಿಗಳನ್ನು ವಾಹನದಲ್ಲಿ ತೆಗೆದುಕೊಂಡು ಹೋಗಲು ಅನುಮತಿ ನೀಡುವುದಿಲ್ಲ.
ಭಾರತದಲ್ಲಿ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ 10,000 ರೂಪಾಯಿವರೆಗೆ ದಂಡ ಮತ್ತು ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.
ಶಸ್ತ್ರಾಸ್ತ್ರ : ಕಾರಿನಲ್ಲಿ ಗನ್ ಅಥವಾ ಇನ್ನಾವುದೇ ಆಯುಧವಿದ್ದರೆ ಟ್ರಾಫಿಕ್ ಪೋಲೀಸರು ನಿಮ್ಮನ್ನು ತಕ್ಷಣ ಪರಿಶೀಲಿಸಬಹುದು. ಶಸ್ತ್ರಾಸ್ತ್ರ ನಿಯಮಗಳು 2016 ರ ಪ್ರಕಾರ, ಅನುಮತಿ ಇದ್ದಲ್ಲಿ ಮಾತ್ರ ಬಂದೂಕನ್ನು ವಾಹನದಲ್ಲಿ ಸಾಗಿಸಬಹುದು. ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದರೆ 7 ರಿಂದ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಕಿಟಕಿ ಬಣ್ಣ : ಭಾರತದಲ್ಲಿ ಟಿಂಟೆಡ್ ಕಿಟಕಿಗಳನ್ನು ನಿಷೇಧಿಸಲಾಗಿದೆ. ಕಾರಿನ ಕಿಟಕಿಗಳು ಹಿಂದಿನ ಮತ್ತು ಮುಂಭಾಗದ ಕನ್ನಡಿಗಳಿಗೆ ಕನಿಷ್ಠ ಶೇಕಡಾ 70ರಷ್ಟು ಗೋಚರತೆಯನ್ನು ಹೊಂದಿರಬೇಕು. ಸೈಡ್ ಮಿರರ್‌ಗಳಿಗೆ ಶೇಕಡಾ 50ರಷ್ಟು ಗೋಚರತೆಯನ್ನು ಹೊಂದಿರಬೇಕು.
ಹಳೆಯ ನಂಬರ್ ಪ್ಲೇಟ್ : ನಂಬರ್ ಪ್ಲೇಟ್ ಪ್ರಸ್ತುತ ಮತ್ತು ಸ್ಥಳೀಯ ನಿಯಮಗಳಿಗೆ ಅನುಗುಣವಾಗಿರಬೇಕು. ಅದು ತಪ್ಪಿದಲ್ಲಿ ದಂಡ ವಿಧಿಸಲಾಗುತ್ತದೆ.
ಅಮಾನ್ಯ ಚಾಲನಾ ಪರವಾನಗಿ : ಅಮಾನ್ಯವಾದ ಪರವಾನಗಿಯೊಂದಿಗೆ ಚಾಲನೆ ಮಾಡುವುದು ಅಪರಾಧ. ಇದಕ್ಕೆ 5,000 ರೂಪಾಯಿ ದಂಡ ಅಥವಾ ಮೂರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು.