
ಆನ್ಲೈನ್ ಪಬ್ಜಿ ಗೇಮ್ ಆಡುವ ವೇಳೆ ತನಗೆ ಪರಿಚಿತನಾದ ಭಾರತೀಯ ಯುವಕನನ್ನು ಮದುವೆಯಾಗಲು ಪಾಕಿಸ್ತಾನದಿಂದ ತನ್ನ ಇಬ್ಬರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಸೀಮಾ ಹೈದರ್ ಕಥೆಯನ್ನು ಹೊಂದಿರುವ ಸಿನಿಮಾ ಒಂದು ಬಾಲಿವುಡ್ ನಲ್ಲಿ ನಿರ್ಮಾಣವಾಗುತ್ತಿದೆ.
‘ಕರಾಚಿ ಟು ನೋಯ್ಡಾ’ ಹೆಸರಿನ ಈ ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಇದರಲ್ಲಿ ಸ್ವತಃ ಸೀಮಾ ಹೈದರ್ ನಟಿಸುತ್ತಿದ್ದಾರೆ. ಇದೀಗ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಬಾಲಿವುಡ್ ಸಿನಿಮಾದಲ್ಲಿ ನಟಿಸದಂತೆ ಖಡಕ್ ಎಚ್ಚರಿಕೆ ನೀಡಿದೆ.
ಈ ಕುರಿತಂತೆ ಮಾತನಾಡಿರುವ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಅಮೇಯ ಖೋಪರ್, ಪಾಕಿಸ್ತಾನಿ ಮೂಲದ ವ್ಯಕ್ತಿಗೆ ಭಾರತೀಯ ಚಿತ್ರರಂಗದಲ್ಲಿ ಸ್ಥಾನವಿಲ್ಲ, ಅಲ್ಲದೆ ಸೀಮಾ ಹೈದರ್ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಏಜೆಂಟ್ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಇಂತಹ ಹಿನ್ನೆಲೆ ಇರುವ ಸೀಮಾ ಜೊತೆ ಸಿನಿಮಾ ಮಾಡುತ್ತಿರುವ ನಿರ್ಮಾಪಕರಿಗೆ ನಾಚಿಕೆಯಾಗಬೇಕು. ನಮ್ಮ ಸಂಘಟನೆ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಗುಡುಗಿದ್ದಾರೆ.