ಬೆಂಗಳೂರು: ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಗ್ಯಾರಂಟಿ ಯೋಜನೆಗಳ ಹಣ ಮದ್ಯದ ಅಂಗಡಿಗಳ ಪಾಲಾಗುತ್ತಿದೆ ಎಂಬ ಬಿಜೆಪಿ ಸದಸ್ಯ ಸಿದ್ದು ಸವದಿ ಹೇಳಿಕೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಿದ್ದು ಸವದಿ, ಮಹಿಳೆಯರಿಗೆ ನೀಡುವ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳನ್ನು ಪುರುಷರು ಹೊಡೆದು ಕಸಿದುಕೊಂಡು ಸಾರಾಯಿ ಅಂಗಡಿಗೆ ಹೋಗುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲಿಗೆ ಹಣ ಕೊಡುತ್ತಿರುವುದರಿಂದ ಅದನ್ನು ಕಸಿದುಕೊಂಡು ಮದ್ಯದ ಅಂಗಡಿಗಳಿಗೆ ಹೋಗುತ್ತಿದ್ದಾರೆ. ಮದ್ಯದ ಅಂಗಡಿಗಳ ಮೂಲಕ ಸರ್ಕಾರಕ್ಕೆ ಹಣ ವಾಪಸ್ ಹೋಗುತ್ತಿದೆ ಎಂದು ಟೀಕಿಸಿದ್ದಾರೆ.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್, 100 ಜನರಿಗೆ ತಲುಪಿದ ಯೋಜನೆಯ ಬಗ್ಗೆ ಮಾತನಾಡದೆ ಮೂವರಿಗೆ ತಪ್ಪಿದೆ ಎಂದು ಟೀಕಿಸುತ್ತಿದ್ದೀರಿ. ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಂದ ಯಾವ ದೂರು ಕೂಡ ಬಂದಿಲ್ಲ. ಪ್ರತಿಪಕ್ಷ ಶಾಸಕರು ಮಾತ್ರ ಈ ಬಗ್ಗೆ ದೂರುತ್ತಿದ್ದಾರೆ. ಹಾಗಾದರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಬಿಡೋಣವೇ? ಗ್ಯಾರಂಟಿ ಯೋಜನೆಗಳು ಬೇಕೋ ಬೇಡವೋ ಎಂಬುದನ್ನು ಸ್ಪಷ್ಟಪಡಿಸುವಂತೆ ಒತ್ತಾಯಿಸಿದ್ದಾರೆ.
ಸುಖಾ ಸುಮ್ಮನೆ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ, ಟೀಕೆ ಮಾಡಬಾರದು. ಈ ಯೋಜನೆಗಳಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಎಷ್ಟೋ ಮಹಿಳೆಯರು ಬದುಕುಕಟ್ಟಿಕೊಳ್ಳತೊಡಗಿದ್ದಾರೆ ಎಂದು ಹೇಳಿದ್ದಾರೆ.