ವಿಮಾನ ಹಾಗೂ ರೈಲು ಪ್ರಯಾಣದ ವೇಳೆ ತಮಗೆ ಪೂರೈಸುವ ಆಹಾರದ ಗುಣಮಟ್ಟದ ಕುರಿತು ಸಾಕಷ್ಟು ವಿಡಿಯೋಗಳು ಹಾಗೂ ಫೋಟೋಗಳನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವುದನ್ನು ಕಂಡಿದ್ದೇವೆ.
ಇಂಥದ್ದೇ ನಿದರ್ಶನವೊಂದರಲ್ಲಿ, ಜೈಪುರದ ವಿಮಾನ ನಿಲ್ದಾಣದಲ್ಲಿ ತಮಗೆ ಒದಗಿಸಿದ ಊಟದಲ್ಲಿ ಸಿಕ್ಕ ಕಲ್ಲೊಂದರ ಚಿತ್ರವನ್ನು ಪ್ರಯಾಣಿಕರೊಬ್ಬರು ಶೇರ್ ಮಾಡಿಕೊಂಡಿದ್ದಾರೆ.
ತಟ್ಟೆಯಲ್ಲಿ ದಾಲ್, ಸಬ್ಜಿ ಹಾಗೂ ಮೊಸರಿದ್ದು, ಅದರಲ್ಲಿ ಕಲ್ಲುಗಳು ಕಂಡು ಬಂದಿರುವ ಚಿತ್ರವೊಂದನ್ನು ಶುಭಾಂಗಿ ಹೆಸರಿನ ಈ ಚಂದಾದಾರರು ಶೇರ್ ಮಾಡಿದ್ದಾರೆ.
“ವಿಮಾನ ನಿಲ್ದಾಣಗಳಲ್ಲಿ ಪೂರೈಸುವ ಆಹಾರದ ಗುಣಮಟ್ಟದಲ್ಲೂ ನಂಬಿಕೆ ಇಡುವುದು ಇತ್ತೀಚೆಗೆ ಕಷ್ಟವಾಗಿದೆ. ಸಾಮಾನ್ಯವಾಗಿ ರೈಲುಗಳಲ್ಲಿ ಸಿಗುವ ಆಹಾರದಲ್ಲಿ ಕಲ್ಲುಗಳನ್ನು ನಿರೀಕ್ಷಿಸಬಹುದು. ಆದರೆ ಇಲ್ಲಿ, ಜೈಪುರ ’ಅಂತಾರಾಷ್ಟ್ರೀಯ’ ವಿಮಾನ ನಿಲ್ದಾಣದ ಪ್ರೈಮಸ್ ಲೌಂಜ್ನಲ್ಲೂ ಸಹ ಹೀಗಾಗಿದೆ. ಬಹಳ ದುಃಖಕರ ಇದು. ನನ್ನ ಹಲ್ಲು ಮುರಿದೇ ಹೋಗುವುದಿತ್ತು,” ಎಂದು ಚಿತ್ರ ಸಹಿತ ಟ್ವೀಟ್ ಮಾಡಿದ್ದಾರೆ.
ಶುಭರ ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ಜೈಪುರ ವಿಮಾನ ನಿಲ್ದಾಣ, “ಡಿಯರ್ ಶುಭ, ನಮಗೆ ಬರೆದಿದ್ದಕ್ಕೆ ಧನ್ಯವಾದಗಳು. ನಿಮ್ಮ ಫೀಡ್ಬ್ಯಾಕ್ ಅನ್ನು ನೋಟ್ ಮಾಡಿಕೊಂಡಿದ್ದೇವೆ ಹಾಗೂ ಸಂಬಂಧಿಸಿದ ತಂಡದೊಂದಿಗೆ ಹಂಚಿಕೊಂಡಿದ್ದೇವೆ,” ಎಂಬ ನಿರೀಕ್ಷಿತ ಉತ್ತರವನ್ನು ಕೊಟ್ಟಿದೆ.