
ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ 50 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರು ಅಂಗಡಿಗಳಿಗೆ, ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, 13 ಅಂಗಡಿಗಳನ್ನು ಧ್ವಂಸ ಮಾಡಲಾಗಿದೆ. ಮೆರವಣಿಗೆ ಸಾಗುವಾಗ ಗಲ್ಲಿ ಗಲ್ಲಿಗಳಿಂದಲೂ ಕಲ್ಲುಗಳು ತೂರಿ ಬಂದಿವೆ. ಪೆಟ್ರೋಲ್ ಬಾಂಬ್, ಮಾರಕಾಸ್ತ್ರಗಳೊಂದಿಗೆ ಗಲಭೆ ಸೃಷ್ಟಿಸಲಾಗಿದೆ. ದರ್ಗಾದ ಬಳಿ ಗಣಪತಿ ಮೆರವಣಿಗೆ ಬಂದಾಗ ಘಟನೆ ನಡೆದಿದೆ. ಡೊಳ್ಳು, ತಮಟೆ ಬಾರಿಸಬೇಡಿ ಎಂದು ಮುಸ್ಲಿಂ ಯುವಕರು ಕಿರಿಕ್ ಮಾಡಿದ್ದಾರೆ. ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ನಾಗಮಂಗಲ ಪೊಲೀಸ್ ಠಾಣೆ ಮುಂದೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.
ಕೆಲವು ಕಿಡಿಗೇಡಿಗಳು ರಸ್ತೆಯಲ್ಲಿ ಲಾಂಗ್, ತಲವಾರ್ ಹಿಡಿದು ಬೆದರಿಸಿದ್ದು, ಪೊಲೀಸರು ಅನೇಕರನ್ನು ವಶಕ್ಕೆ ಪಡೆದಿದ್ದಾರೆ. ನಮ್ಮ ಗಂಡಂದಿರು, ಮಕ್ಕಳು ಯಾವುದೇ ತಪ್ಪು ಮಾಡಿಲ್ಲ. ಬೇಕಾದರೆ ಆಧಾರ್ ಕಾರ್ಡ್ ಚೆಕ್ ಮಾಡಿ. ನಾವು ಬೇರೆ ಊರಿನವರು ಎಂದು ಅನ್ಯಕೋಮಿನ ಮಹಿಳೆಯರು ಹೇಳಿದ್ದಾರೆ.
ನಿನ್ನೆ ರಾತ್ರಿಯೇ ಅನ್ಯಕೋಮಿನ 20 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ತಮ್ಮವರನ್ನು ಬಂಧಿಸಿದ್ದಕ್ಕೆ ಮುಸ್ಲಿಂ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಈ ಊರಿನವರಲ್ಲ, ಬಸ್ ನಿಂದ ಇಳಿಸಿ ಬಂಧಿಸಿದ್ದಾರೆ ಎಂದು ದೂರಿದ್ದಾರೆ. ಪೊಲೀಸರ ವಿರುದ್ಧ ಮುಸ್ಲಿಂ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.