ಹೊಸಪೇಟೆ: ಸಿರಿಗೆರೆ ಸ್ವಾಮೀಜಿ ಬೈಕ್ ರ್ಯಾಲಿ ವೇಳೆ ಕಲ್ಲು ತೂರಾಟ ನಡೆದ ಘಟನೆ ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಕಾಳಾಪುರದಲ್ಲಿ ನಡೆದಿದೆ.
ಸಿರಿಗೆರೆ ಸ್ವಾಮೀಜಿ ಮತ್ತು ಉಜ್ಜೈನಿ ಮಠದ ನಡುವೆ ದಶಕಗಳಿಂದ ಭಿನ್ನಾಭಿಪ್ರಾಯವಿದೆ. ಕೊಟ್ಟೂರಿನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಹಮ್ಮಿಕೊಂಡಿದ್ದು, ಸಿರಿಗೆರೆ ಸ್ವಾಮೀಜಿಯವರು ಜಗಳೂರಿನಿಂದ ಕೊಟ್ಟೂರು ಪಟ್ಟಣದವರೆಗೆ ಹೊರಟ ಸಂದರ್ಭದಲ್ಲಿ ಬೈಕ್ ರ್ಯಾಲಿ ನಡೆಸಲಾಗಿದೆ.
ರ್ಯಾಲಿ ಕಾಳಾಪುರ ಗ್ರಾಮದ ಮೂಲಕ ಹಾದು ಹೋಗುವಾಗ ರ್ಯಾಲಿಯಲ್ಲಿದ್ದ ಕೆಲವರು ಉಜ್ಜಯಿನಿಗೆ ತೆರಳಲು ಮುಂದಾಗಿದ್ದು, ವಾಗ್ವಾದ ನಡೆದಿದೆ. ಬೈಕ್ ರ್ಯಾಲಿ ವೇಳೆ ಕಾಳಾಪುರ ಗ್ರಾಮದ ಜನರ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಬೈಕ್ ಸೇರಿ ಹಲವು ವಾಹನ ಮನೆಗಳ ಮೇಲೆ ಕಲ್ಲು ತೂರಿ ಹಾನಿಗೊಳಿಸಲಾಗಿದೆ. ಬಣವೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಪೊಲೀಸರ ಮೇಲೆಯೂ ಹಲ್ಲೆ ಮಾಡಲಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು 9 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.