ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಹಳಿಗೆ ಬಂದಾಗಿನಿಂದ ಅದರ ಮೇಲೆ ಕಲ್ಲು ತೂರುವ ಘಟನೆಗಳು ನಡೆಯುತ್ತಲೇ ಇವೆ. ಮತ್ತೊಂದು ಘಟನೆ ಬಿಹಾರದಿಂದ ವರದಿಯಾಗಿದ್ದು ಹೌರಾ-ನ್ಯೂ ಜಲ್ಪೈಗುರಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಲ್ಲು ತೂರಾಟ ಮಾಡಲಾಗಿದೆ.
ರೈಲಿನ 6 ನೇ ಕೋಚ್‌ನಲ್ಲಿ ಬರ್ತ್ ನಂ.70 ನಲ್ಲಿ ಕುಳಿತಿದ್ದವರು ದಾಲ್ಖೋಲಾ-ಟೆಲ್ಟಾ ರೈಲು ನಿಲ್ದಾಣವನ್ನು ದಾಟುವಾಗ ಕಲ್ಲು ತೂರಾಟದ ಬಗ್ಗೆ ಆರ್‌ಪಿಎಫ್‌ಗೆ ಮಾಹಿತಿ ನೀಡಿದ್ದಾರೆ. ಕಲ್ಲು ತೂರಾದಿಂದ ಹೈಸ್ಪೀಡ್ ರೈಲಿನ ಒಂದು ಕೋಚ್‌ನ ಕಿಟಕಿ ಹಲಗೆಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಕೋಚ್‌ನ ಬಲಭಾಗದ ಗಾಜಿನ ಕಿಟಕಿಗೆ ಹಾನಿಯಾಗಿದೆ. ಶುಕ್ರವಾರ ಸಂಜೆ 04.25 ರ ಸುಮಾರಿಗೆ ದಾಲ್ಖೋಲಾ ಮತ್ತು ಟೆಲ್ಟಾ ರೈಲು ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಕೋಚ್ ಸಂಖ್ಯೆ C-6 ರ ಬಲಭಾಗದ ಕಿಟಕಿ ಗಾಜು ಹಾನಿಗೊಳಗಾಗಿದೆ. ಈ ವಿಷಯವನ್ನು ರೈಲ್ವೇ ಪೊಲೀಸ್ ದಲ್ಖೋಲಾ ಅವರಿಗೆ ವರದಿ ಮಾಡಲಾಗಿದ್ದು ಅವರು ಸ್ಥಳದಲ್ಲೇ ತನಿಖೆ ನಡೆಸಲು ತನಿಖಾ ತಂಡವನ್ನು ಕಳುಹಿಸಿದ್ದಾರೆ.
ಜನವರಿ 2 ರಂದು ಹೌರಾದಿಂದ ನ್ಯೂ ಜಲ್ಪೈಗುರಿಗೆ ಸಂಪರ್ಕ ಕಲ್ಪಿಸುವ ರೈಲು ಪ್ರಾರಂಭವಾದ ಕೇವಲ ನಾಲ್ಕು ದಿನಗಳಲ್ಲಿ ಕಲ್ಲು ತೂರಾಟ ನಡೆಸಲಾಗಿತ್ತು.
2022 ರಲ್ಲಿ ಈಶಾನ್ಯ ಫ್ರಾಂಟಿಯರ್ ರೈಲ್ವೇ (ಎನ್‌ಎಫ್‌ಆರ್) ಅಡಿಯಲ್ಲಿ 50 ಕ್ಕೂ ಹೆಚ್ಚು ಕಲ್ಲು ತೂರಾಟದ ಘಟನೆಗಳು ವರದಿಯಾಗಿವೆ . ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಲ್ಲು ತೂರಾಟದ ಅನೇಕ ವರದಿಗಳ ಹಿನ್ನೆಲೆಯಲ್ಲಿ ತೀವ್ರ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.