ಹೊಟ್ಟೆಯ ಹಲವು ಸಮಸ್ಯೆಗಳಿಗೆ ಮಜ್ಜಿಗೆಯೇ ಮದ್ದು ಎಂಬುದನ್ನು ನಿಮಗೆ ಮನೆಯ ಅಜ್ಜಿಯಂದಿರು ಹೇಳಿರಬಹುದು. ಇದು ಸುಳ್ಳಲ್ಲ.
ಮಜ್ಜಿಗೆಯಿಂದ ಉದರಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ದೂರ ಮಾಡಬಹುದು.
ಹೊರಗಿನ ತಿಂಡಿ ತಿನಿಸು ತಿಂದು ನಿಮ್ಮ ಹೊಟ್ಟೆ ಕೆಟ್ಟಿದೆಯೇ? ಮಜ್ಜಿಗೆಗೆ ಚಿಟಿಕೆ ಉಪ್ಪು ಹಾಕಿ ಕುಡಿಯಿರಿ. ಇದರಿಂದ ಹೊಟ್ಟೆಯ ಸೋಂಕು ದೂರವಾಗುತ್ತದೆ. ಕೆಲವೊಮ್ಮೆ ಇದಕ್ಕೆ ಒಂದು ಚಮಚ ಸಕ್ಕರೆ ಹಾಕಿ ಕುಡಿದರೆ ಹೊಟ್ಟೆಯ ತ್ಯಾಜ್ಯವೆಲ್ಲಾ ಹೊರಹೋಗಿ ನೀವು ಸ್ವಸ್ಥರಾಗುತ್ತೀರಿ.
ಇನ್ನು ಹುಳಕ್ಕೆ ಸಂಬಂಧಿಸಿದಂತೆ ಹೊಟ್ಟೆ ನೋಯುತ್ತಿದ್ದರೆ ಮಜ್ಜಿಗೆಗೆ ಚಿಟಿಕೆ ಇಂಗು ಹಾಕಿ ಕರಗಿಸಿ. ಉಪ್ಪು ಸೇರಿಸಿ. ಮಜ್ಜಿಗೆ ಹುಳಿ ಇದ್ದಷ್ಟು ಒಳ್ಳೆಯದು. ಒಂದು ಲೋಟ ಮಜ್ಜಿಗೆಯನ್ನು ಬೆಳಿಗ್ಗೆ ಸಂಜೆ ಕುಡಿದರೆ ಹುಳದ ಹೊಟ್ಟೆನೋವು ದೂರವಾಗುತ್ತದೆ. ಜೀರ್ಣಕ್ರಿಯೆಯೂ ಸರಾಗವಾಗುತ್ತದೆ.
ದಾಹ ಎನಿಸಿದಾಗೆಲ್ಲಾ ನೀರು ಕುಡಿದು ಬೇಸರ ಬಂದಿದೆಯೇ. ಮಜ್ಜಿಗೆಗೆ ನೀರು ಹಾಕಿ ತೆಳುವಾಗಿಸಿಕೊಳ್ಳಿ. ಉಪ್ಪು, ಸಣ್ಣಗೆ ಕತ್ತರಿಸಿದ ಶುಂಠಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಸೇರಿಸಿ ಆಗಾಗ ಕುಡಿಯುತ್ತಿರಿ. ಇದರಿಂದ ಹೊಟ್ಟೆ ತುಂಬಿದ ಅನುಭವಾಗುತ್ತದೆ. ದೇಹ ತೂಕ ಇಳಿಕೆಗೆ ಇದು ಹೇಳಿ ಮಾಡಿಸಿದ ಸೂತ್ರ.