
ಮಾರ್ಚ್ 18 ರಂದು ನವದೆಹಲಿಯ ಗೋವಿಂದಪುರಿ ಪ್ರದೇಶದಿಂದ ಕಳುವಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ ಅವರ ಕಾರನ್ನು ಪೊಲೀಸರು ವಾರಣಾಸಿಯಲ್ಲಿ ಪತ್ತೆ ಹಚ್ಚಿದ್ದಾರೆ. ಕಳ್ಳತನ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಈಗ ಬಂಧಿಸಲಾಗಿದೆ.
ಉತ್ತರ ಪ್ರದೇಶದ ಫರೀದಾಬಾದ್ ಜಿಲ್ಲೆ ನಿವಾಸಿಗಳಾದ ಶಾಹಿದ್ ಮತ್ತು ಶಿವಾಂಗ್ ತ್ರಿಪಾಠಿ ಬಂಧಿತ ಆರೋಪಿಗಳಾಗಿದ್ದು, ಇವರು ಕ್ರೇಟಾ ಕಾರಿನ ಮೂಲಕ ದೆಹಲಿಗೆ ಆಗಮಿಸಿ ಗೋವಿಂದ ಪುರಿ ಪ್ರದೇಶದಿಂದ ಮಲ್ಲಿಕಾ ಅವರ ಫಾರ್ಚುನರ್ ಕಾರನ್ನು ಕಳವು ಮಾಡಿದ್ದರು.
ಬಳಿಕ ನಂಬರ್ ಪ್ಲೇಟ್ ಬದಲಾಯಿಸಿ ಆಲಿಘರ್, ಲಖೀಂಪುರ ಖೇರಿ, ಬರೇಲಿ, ಸೀತಾಪುರ್, ಲಕ್ನೋ ಮಾರ್ಗವಾಗಿ ವಾರಣಾಸಿ ತಲುಪಿದ್ದರು. ಅಲ್ಲಿಂದ ಈ ಕಾರನ್ನು ನಾಗಾಲ್ಯಾಂಡ್ ಗೆ ಕಳುಹಿಸಲು ಯೋಜಿಸಿದ್ದು, ಇದೀಗ ಕಳ್ಳತನ ಮಾಡಿದ್ದ ಕಾರಿನ ಸಮೇತ ಬಂಧನಕ್ಕೆ ಒಳಗಾಗಿದ್ದಾರೆ.