
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ಬೆನ್ನಲ್ಲೇ ಷೇರುಪೇಟೆ ದಾಖಲೆಯ ಏರಿಕೆ ಕಂಡಿದೆ. ಬಿಜೆಪಿಯ ಗೆಲುವಿನಿಂದ ಉತ್ತೇಜಿತವಾಗಿರುವ ಸೆನ್ಸೆಕ್ಸ್ ಸೋಮವಾರ 1,384 ಅಂಕಗಳ ಏರಿಕೆ ಕಂಡು 68,865 ಅಂಕಗಳಿಗೆ ತಲುಪಿತ್ತು. ನಿಫ್ಟಿ ಕೂಡ 20,686 ಅಂಕಗಳಲ್ಲಿ ಕೊನೆಗೊಂಡಿತ್ತು. ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರ ಕೂಡ ಏರುಗತಿಯಲ್ಲೇ ಸಾಗಿವೆ.
ಇನ್ನೊಂದೆಡೆ ಚಿನ್ನದ ದರವೂ ದಾಖಲೆ ಮಟ್ಟದಲ್ಲಿ ಏರುತ್ತಿದೆ. ಸೋಮವಾರ ಷೇರು ಮಾರುಕಟ್ಟೆ ಮತ್ತು ಬುಲಿಯನ್ ಮಾರುಕಟ್ಟೆಯಲ್ಲಿ ಏಕಕಾಲದಲ್ಲಿ ಏರಿಕೆಯಾಗಿತ್ತು. ಎರಡೂ ಏಕಕಾಲದಲ್ಲಿ ಏರಿಕೆಯಾಗುವುದು ಅಪರೂಪ. ಸಾಮಾನ್ಯವಾಗಿ ಷೇರು ಮಾರುಕಟ್ಟೆ ಏರಿದಾಗ ಚಿನ್ನದ ದರ ಕಡಿಮೆಯಾಗುತ್ತದೆ. ಚಿನ್ನದ ದರ ಹೆಚ್ಚಾದಾಗ ಷೇರು ಮಾರುಕಟ್ಟೆ ಇಳಿಯುತ್ತದೆ.
ಷೇರುಪೇಟೆಯಲ್ಲಿ ಉತ್ಕರ್ಷ ಉಂಟಾದಾಗ ಹೂಡಿಕೆದಾರರು ಷೇರುಗಳಲ್ಲಿ ಹೂಡಿಕೆ ಮಾಡಲು ಹೆಚ್ಚು ಉತ್ಸುಕರಾಗುತ್ತಾರೆ. ಚಿನ್ನದ ಮೇಲೆ ಹೂಡಿಕೆ ಮಾಡಲು ಹೆಚ್ಚು ಆಸಕ್ತಿ ತೋರುವುದಿಲ್ಲ. ಇದಕ್ಕೆ ತದ್ವಿರುದ್ಧವಾಗಿ ಷೇರು ಮಾರುಕಟ್ಟೆಯು ಕುಸಿದಾಗ ಹೂಡಿಕೆದಾರರು ಷೇರುಗಳಲ್ಲಿ ಹೂಡಿಕೆ ಮಾಡಲು ಭಯಪಡುತ್ತಾರೆ ಮತ್ತು ಚಿನ್ನದ ಹೂಡಿಕೆಯತ್ತ ಆಕರ್ಷಿತರಾಗುತ್ತಾರೆ.
ಕೆಲವು ಸಂದರ್ಭಗಳಲ್ಲಿ ಷೇರು ಮಾರುಕಟ್ಟೆ ಮತ್ತು ಚಿನ್ನದ ದರದ ನಡುವಿನ ನೇರ ಸಂಬಂಧವನ್ನು ಸಹ ಕಾಣಬಹುದು. ಜಾಗತಿಕ ಆರ್ಥಿಕತೆಯಲ್ಲಿ ಅನಿಶ್ಚಿತತೆ ಇದ್ದಾಗ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಆಕರ್ಷಿತರಾಗುತ್ತಾರೆ. ಚಿನ್ನವನ್ನು ಯಾವಾಗಲೂ ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸಲಾಗುತ್ತದೆ. ಷೇರು ಮಾರುಕಟ್ಟೆ ಮತ್ತು ಚಿನ್ನದ ಬೆಲೆ ಏರಿಕೆಗೆ ಹಲವು ಕಾರಣಗಳಿವೆ.
ಹಣದುಬ್ಬರ ದರ – 2023ರಲ್ಲಿ ಚಿನ್ನದ ಬೆಲೆ ವೇಗವಾಗಿ ಏರಿಕೆಯಾಗಿದೆ. ಇದಕ್ಕೆ ಮುಖ್ಯ ಕಾರಣ ರಷ್ಯಾ-ಉಕ್ರೇನ್ ನಡುವಣ ಯುದ್ಧ. ಯುದ್ಧದಿಂದಾಗಿ ಜಾಗತಿಕ ಆರ್ಥಿಕ ಅನಿಶ್ಚಿತತೆಯು ವೇಗವಾಗಿ ಹೆಚ್ಚಾಯಿತು. ಹೂಡಿಕೆದಾರರು ಚಿನ್ನವನ್ನು ಸುರಕ್ಷಿತವೆಂದು ಪರಿಗಣಿಸಿ ಹೂಡಿಕೆ ಮಾಡಿದ್ದಾರೆ. ಅಮೆರಿಕದಲ್ಲಿ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಹೂಡಿಕೆದಾರರು ಚಿನ್ನದತ್ತ ಮುಖ ಮಾಡಿದರು.
ಚುನಾವಣೆಯಲ್ಲಿ ಬಿಜೆಪಿ ಗೆಲುವು – ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ತಾನದಲ್ಲಿ ಬಿಜೆಪಿಯ ಭರ್ಜರಿ ಗೆಲುವಿನಿಂದಾಗಿ ಷೇರುಪೇಟೆಯೂ ಬಲಗೊಂಡಿದೆ. ಇದು ವಿದೇಶಿ ಸಾಂಸ್ಥಿಕ ಹೂಡಿಕೆದಾರರ ವಿಶ್ವಾಸವನ್ನು ಬಲಪಡಿಸಿದೆ.
ದಾಖಲೆ ಜಿಡಿಪಿ – 2023-24ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಅಂಕಿ-ಅಂಶಗಳು ಶೇಕಡಾ 7.6ಕ್ಕೆ ತಲುಪಿದ ಕಾರಣ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಭಾವನೆ ಕಂಡುಬಂದಿದೆ. ಚೀನಾದ ಜಿಡಿಪಿ ಶೇ.4.9ರ ಮಟ್ಟದಲ್ಲಿಯೇ ಇದೆ. ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಭಾರತವು ತ್ವರಿತ ಆರ್ಥಿಕ ಬೆಳವಣಿಗೆಯನ್ನು ಸಾಧಿಸುವ ದೇಶವಾಗಿ ಉಳಿದಿದೆ. ಈ ಕಾರಣಕ್ಕಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಗಮನ ಭಾರತೀಯ ಷೇರು ಮಾರುಕಟ್ಟೆಯತ್ತ ನೆಟ್ಟಿದೆ.
ಕಚ್ಚಾ ತೈಲ ಕುಸಿತ – ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 80 ಡಾಲರ್‌ಗಿಂತ ಕಡಿಮೆಯಾಗಿದೆ. ಇದು ಹೂಡಿಕೆದಾರರ ಭಾವನೆಗಳನ್ನ ಬಲಪಡಿಸಿದೆ.
ಆರ್ಥಿಕ ಬೆಳವಣಿಗೆ – ಬಲವಾದ ಆರ್ಥಿಕ ಬೆಳವಣಿಗೆಯು ಷೇರು ಮಾರುಕಟ್ಟೆಯನ್ನು ಉತ್ತೇಜಿಸುತ್ತದೆ. ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಅಂಕಿ-ಅಂಶಗಳು ಶೇಕಡಾ 7.6 ತಲುಪಿದ್ದವು. ನಂತರ ಷೇರುಪೇಟೆಯಲ್ಲಿ ನಿರಂತರ ಏರಿಕೆ ಕಾಣುತ್ತಿದೆ. ಇದರ ಪರಿಣಾಮ ಚಿನ್ನದ ಬೆಲೆಯ ಮೇಲೂ ಕಂಡು ಬರುತ್ತಿದೆ.