ಕಲಬುರಗಿ : ಐದು ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ಕ್ರಮವಹಿಸಲಾಗುತ್ತಿದೆ. ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ಬಗ್ಗೆ ಬಿಜೆಪಿಯವರು ಏನೇ ಹೇಳಿದರೂ ಯಾರೂ ಗಂಭೀರವಾಗಿ ಪರಿಗಣಿಸಬಾರದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆ ಕಲಬುರಗಿ ವತಿಯಿಂದ 2019-20 ಸಾಲಿನ ಡಿಎಮ್ಎಫ್ ಯೋಜನೆಯಡಿಯಲ್ಲಿ ಇಂದು ಚಿತ್ತಾಪುರ ತಾಲೂಕಿನ ಸಾವಂತಖೇಡ ಗ್ರಾಮದಿಂದ ಜೀವನ ಮಾರಡಗಿವರೆಗೆ ರಸ್ತೆ ಸುಧಾರಣೆಗೆ ₹266.55 ಲಕ್ಷ ವೆಚ್ಚದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಸಚಿವರು, ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಸರ್ಕಾರ ಬದ್ಧವಾಗಿದ್ದು ಕುಡಿಯುವ ನೀರು, ರಸ್ತೆ ನಿರ್ಮಾಣದಂತ ಮೂಲಭೂತ ಸೌಲಭ್ಯ ಒದಗಿಸುವುದು ಮೊದಲ ಆದ್ಯತೆ ನೀಡಲಾಗುವುದು. ಜೊತೆಗೆ ಐದು ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ಕ್ರಮವಹಿಸಲಾಗುತ್ತಿದೆ. ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ಬಗ್ಗೆ ಬಿಜೆಪಿಯವರು ಏನೇ ಹೇಳಿದರೂ ಯಾರೂ ಗಂಭೀರವಾಗಿ ಪರಿಗಣಿಸಬಾರದು ಎಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಆಳುವ ಸರ್ಕಾರ ಬದಲಿಗೆ ಆಲಿಸುವ ಸರ್ಕಾರವಿದೆ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ವಿಧಾನಸೌಧವನ್ನು ವ್ಯಾಪಾರಸೌಧವನ್ನಾಗಿ ಮಾಡಿದ್ದರು. ಆದರೆ ನಾವು ಅಧಿಕಾರಕ್ಕೆ ಬಂದ ಮೇಲೆ ವಿಧಾನಸೌಧವನ್ನು ಸಾರ್ವಜನಿಕರಿಗೆ ಮುಕ್ತವಾಗಿಸಿದ್ದೇವೆ.
ಕೇಂದ್ರ ಸರ್ಕಾರದ ಹಾಗೂ ಕಲಬುರಗಿ ಸಂಸದರ ನಿರ್ಲಕ್ಷ್ಯತನದಿಂದ ರೇಲ್ವೆ ವಲಯ, ನಿಮ್ಜ್ ಸೇರಿದಂತೆ ಹಲವಾರು ಅಭಿವೃದ್ದಿ ಪರವಾದ ಯೋಜನೆಗಳು ಮಂಜೂರಾಗಿದ್ದರೂ ಕೂಡಾ ಜಾರಿಗೆ ಬಂದಿಲ್ಲ. ಕಾರಣ, ಕೇಂದ್ರ ಸರ್ಕಾರದ ನಿರ್ಲಕ್ಷ್ಯತನ ಎಷ್ಟು ಮುಂದುವರೆದಿದೆ ಎಂದರೆ ನಮ್ಮ ರಾಜ್ಯ ಸರ್ಕಾರಕ್ಕೆ ಬರಬೇಕಿದ್ದ ಅನುದಾನದ ತೆರಿಗೆ ಪಾಲನ್ನು ಸರಿಯಾಗಿ ಕೊಡುತ್ತಿಲ್ಲ. ಈ ಬಗ್ಗೆ ನಾವು ಕೇಳಲು ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿ ಬಂದಿದ್ದೇವೆ ಎಂದು ತಿಳಿಸಿದರು.