ಯಾದಗಿರಿ: ಆಸ್ತಿ ಆಸೆಗಾಗಿ ಮಲತಾಯಿಯೊಬ್ಬಳು ಐದು ತಿಂಗಳ ಮಗುವನ್ನೇ ಕೊಂದ ಹೃದಯವಿದ್ರಾವಕ ಘಟನೆ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಬಬಲಾದ ಗ್ರಾಮದಲ್ಲಿ ನಡೆದಿದೆ.
ದೇವಮ್ಮ ಚಟ್ಟಿಗೇರಿ ಮಗುವನ್ನು ಕೊಂದ ಮಲತಾಯಿ. ಸಂಗೀತಾ ಮೃತ ಐದು ತಿಂಗಳ ಮಗು. ಬಬಲಾದ ಗ್ರಾಮದ ಸಿದ್ದಪ್ಪ ಚೆಟ್ಟಿಗೇರಿ ಹಾಗೂ ದೇವಮ್ಮ ವಿವಾಹವಾಗಿ 7 ವರ್ಷವಾದರೂ ಮಕ್ಕಳಿರಲಿಲ್ಲ. ಈ ಕಾರಣಕ್ಕೆ ಸಿದ್ದಪ್ಪ, ಶ್ರೀದೇವಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದ. ಈ ನಡುವೆ ಮೊದಲ ಪತ್ನಿಗೂ ಮಕ್ಕಳಾಗಿದ್ದರು. ಐದು ತಿಂಗಳ ಹಿಂದೆ ಎರಡನೇ ಪತ್ನಿಗೂ ಹೆಣ್ಣುಮಗು ಜನಿಸಿತ್ತು. ಆಸ್ತಿಯಲ್ಲಿ ಪಾಲು ಹೋಗುತ್ತೆ ಎಂಬ ಕಾರಣಕ್ಕೆ ದೇವಮ್ಮ, ಶ್ರೀದೇವಿಯ ಮಗುವನ್ನು ಕೊಂದಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಬಲವಂತವಾಗಿ ಮಗುವನ್ನು ಕರೆದೊಯ್ದು ಮಗುವಿಗೆ ಹಾಲುಣಿಸಿದ್ದು, ಹಾಲು ಕುಡಿದ ಮೂರು ಗಂಟೆಯಲ್ಲಿ ಮಗುವಿನ ಬಾಯಲ್ಲಿ ನೊರೆಬರಲು ಆರಂಭವಾಗಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯಲಾಯಿತಾದರೂ ಮಾರ್ಗಮಧ್ಯೆಯೇ ಮಗು ಸಾವನ್ನಪ್ಪಿದ್ದಳು. ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.