
ಕೊಪ್ಪಳ: ಕೊಪ್ಪಳ ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಂತೆ ಬಲ್ಡೋಟಾ ಸ್ಟೀಲ್ ಮತ್ತು ಪವರ್ ಪ್ಲಾಂಟ್ ಕಂಪನಿಯು ಇಂಟಿಗ್ರೇಟೆಡ್ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಮುಂದಾಗಿರುವುದನ್ನು ವಿರೋಧಿಸಿ ಫೆಬ್ರವರಿ 24 ರಂದು ಕೊಪ್ಪಳ ಬಂದ್ ಮಾಡಲು ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ತೀರ್ಮಾನ ಕೈಗೊಂಡಿದೆ.
ಶನಿವಾರ ಕೊಪ್ಪಳದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ಪೂರ್ವಭಾವಿ ಸಭೆ ನಡೆಸಿದ್ದು, ಕಾರ್ಖಾನೆ ವಿರೋಧಿಸಿ ಫೆಬ್ರವರಿ 24ರಂದು ಬಂದ್ ನಡೆಸಲು ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೆ, ಈ ಕಾರ್ಖಾನೆ ವಿರೋಧಿಸಿ ನಿರಂತರ ಹೋರಾಟ ಕೈಗೊಳ್ಳಲು ನಿರ್ಧರಿಸಲಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಕೊಪ್ಪಳ ಸಮೀಪ ಸ್ಟೀಲ್ ಮತ್ತು ಪವರ್ ಪ್ಲಾಂಟ್ ಇಂಟಿಗ್ರೇಟೆಡ್ ಉಕ್ಕಿನ ಕಾರ್ಖಾನೆ ಸ್ಥಾಪಿಸುವುದಾಗಿ ಘೋಷಿಸಲಾಗಿತ್ತು. ಇದರ ಬೆನ್ನಲ್ಲೇ ಸಂಘಟನೆಗಳಿಂದ ಚರ್ಚೆ ಮತ್ತು ಸರಣಿ ಸಭೆ ನಡೆಸಿ ಕಾರ್ಖಾನೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಲಾಗಿದೆ. ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳ ಮುಖಂಡರು, ಹೋರಾಟಗಾರರು ಶನಿವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದು, ಬಂದ್ ನಡೆಸಲು ತೀರ್ಮಾನಿಸಿದ್ದಾರೆ.