ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಿದ್ದೆಗೆ ಬಹಳ ಪ್ರಾಮುಖ್ಯತೆ. ಸ್ಲೀಪ್ ಸೈಕಲ್ ಸರಿಯಾಗಿದ್ದಲ್ಲಿ ಮಾತ್ರ ನಾವು ಆರೋಗ್ಯವಾಗಿರಬಹುದು. ರಾತ್ರಿಯಿಡೀ ಸೋಶಿಯಲ್ ಮೀಡಿಯಾ ಸ್ಕ್ರೋಲ್ ಮಾಡುವುದು, ತಡರಾತ್ರಿವರೆಗೂ ಓದುವುದು ಅಥವಾ ಟಿವಿ ನೋಡುವುದು ನಮ್ಮ ಸ್ಲೀಪ್ ಸೈಕಲ್ ಅನ್ನೇ ಹಾಳು ಮಾಡುತ್ತದೆ. ನಿದ್ದೆಯ ಜೊತೆಗೆ ರಾಜಿ ಮಾಡಿಕೊಳ್ಳುವುದು ಆರೋಗ್ಯಕ್ಕೆ ಹಾನಿಕಾರಕ. ಆದರೂ ಅನೇಕರು ನಿದ್ದೆಯನ್ನು ಪೂರ್ಣಗೊಳಿಸುವುದಿಲ್ಲ.
ಆರೋಗ್ಯವಂತ ವ್ಯಕ್ತಿ ಪ್ರತಿದಿನ 7-8 ಗಂಟೆಗಳ ಕಾಲ ನಿದ್ದೆ ಮಾಡಬೇಕು. ಇದು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅವಶ್ಯಕ. ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುವುದು ಮತ್ತು ಸಂಪೂರ್ಣ ನಿದ್ದೆ ಮಾಡುವುದು ಶಕ್ತಿಯ ಮಟ್ಟದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುತ್ತದೆ. ನಿದ್ರೆಯ ಮಾದರಿಯನ್ನು ಹಾಳುಮಾಡುವುದು ಖಿನ್ನತೆ ಮತ್ತು ಒತ್ತಡದ ಅಪಾಯವನ್ನು ಹೆಚ್ಚಿಸುತ್ತದೆ.
ಸ್ಥೂಲಕಾಯತೆಯ ಅಪಾಯ – ತಡವಾಗಿ ಮಲಗುವುದರಿಂದ ದೇಹದಲ್ಲಿ ಲೆಪ್ಟಿನ್ (ಹಸಿವು ಕಡಿಮೆ ಮಾಡುವ) ಹಾರ್ಮೋನ್ ಮಟ್ಟವು ಕಡಿಮೆಯಾಗುತ್ತದೆ ಮತ್ತು ಗ್ರೆಲಿನ್ (ಹಸಿವು ಹೆಚ್ಚಾಗುವುದು) ಹಾರ್ಮೋನ್ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ಅತಿಯಾಗಿ ತಿನ್ನುವ ಅಭ್ಯಾಸವನ್ನು ಹೆಚ್ಚಿಸುತ್ತದೆ ಮತ್ತು ಸ್ಥೂಲಕಾಯಕ್ಕೆ ಕಾರಣವಾಗುತ್ತದೆ.
ಜೀರ್ಣಾಂಗ ವ್ಯವಸ್ಥೆಗೆ ಹಾನಿ – ತಡರಾತ್ರಿಯಲ್ಲಿ ಆಹಾರ ಸೇವಿಸುವುದರಿಂದ ಮತ್ತು ಬೇಗನೆ ನಿದ್ದೆ ಮಾಡದೇ ಇರುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದು ಅಸಿಡಿಟಿ, ಮಲಬದ್ಧತೆ, ವಾಯು ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು.
ಮಧುಮೇಹದ ಅಪಾಯ ಹೆಚ್ಚಾಗುತ್ತದೆ – ತಡವಾಗಿ ನಿದ್ರಿಸುವುದರಿಂದ ದೇಹದಲ್ಲಿನ ಇನ್ಸುಲಿನ್ ಕಡಿಮೆಯಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಮಧುಮೇಹಕ್ಕೂ ಕಾರಣವಾಗಬಹುದು.
ಹೃದ್ರೋಗದ ಅಪಾಯ – ತಡರಾತ್ರಿ ಮಲಗುವುದು ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಹೃದಯದ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ.
ತಡರಾತ್ರಿಯಲ್ಲಿ ಮಲಗುವುದು ಒಂದು ರೀತಿಯ ಟ್ರೆಂಡ್ ಆಗಿಬಿಟ್ಟಿದೆ. ಆದರೆ ಇದು ದೈನಂದಿನ ಅಭ್ಯಾಸವಾಗಬಾರದು. ಹಾಗಾದಲ್ಲಿ ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ.