ಬೆಳಗಾವಿ: ತೀರ್ಥದ ಜೊತೆಗೆ ಕೃಷ್ಣನ ವಿಗ್ರಹವನ್ನು ವ್ಯಕ್ತಿಯೊಬ್ಬ ನುಂಗಿದ್ದು, ಗಂಟಲಿನಲ್ಲಿ ಸಿಲುಕಿದ ವಿಗ್ರಹವನ್ನು ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
45 ವರ್ಷದ ವ್ಯಕ್ತಿಯೊಬ್ಬರು ತೀರ್ಥ ಸೇವಿಸುವ ಸಂದರ್ಭದಲ್ಲಿ ಬಟ್ಟಲಿನಲ್ಲಿ ತೀರ್ಥದಲ್ಲಿದ್ದ ಶ್ರೀಕೃಷ್ಣನ 50 ಗ್ರಾಂ ತೂಕದ ಲೋಹದ ವಿಗ್ರಹವನ್ನು ನುಂಗಿದ್ದಾರೆ. ಗಂಟಲಿನಲ್ಲಿ ಸಿಲುಕಿದ್ದರಿಂದ ಊದಿಕೊಂಡು ನೋವಾಗಿದೆ. ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದಾಗ ಶ್ರೀ ಕೃಷ್ಣನ ವಿಗ್ರಹ ಇರುವುದು ಗೊತ್ತಾಗಿದೆ.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಕೃಷ್ಣ ವಿಗ್ರಹ ಇರುವುದನ್ನು ಗಮನಿಸಿದ್ದಾರೆ. ನಂತರ ಶಸ್ತ್ರ ಚಿಕಿತ್ಸೆ ನಡೆಸಿ ಗಂಟಲಲ್ಲಿ ಸಿಲುಕಿದ್ದ ಕೃಷ್ಣನ ಮೂರ್ತಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.