ಬೆಂಗಳೂರು: ರಾಜ್ಯಾದ್ಯಂತ ಫೆಬ್ರವರಿ 16 ರಿಂದ ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ಅರಣ್ಯ ಗಡಿ ಗುರುತಿಸುವ ಸಲುವಾಗಿ ಜಂಟಿ ಸರ್ವೆ ಕಾರ್ಯ ನಡೆಯುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಒಂದು ವೇಳೆ ಕಂದಾಯ ಭೂಮಿ ತಪ್ಪಾಗಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವುದು ಖಚಿತವಾದಲ್ಲಿ ಆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗುತ್ತದೆ. ಗಡಿ ಗುರುತಿಸಿದ ನಂತರ ಅಂತಹ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದ್ದಲ್ಲಿ ಅರ್ಹ ಹಿಡುವಳಿದಾರರಿಗೆ ಸಾಗುವಳಿ ಚೀಟಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅರಣ್ಯ ಮತ್ತು ಕಂದಾಯ ಭೂಮಿ ಗಡಿ ವಿಚಾರದಲ್ಲಿ ಸಮಸ್ಯೆಗಳಿದ್ದು, ಅರಣ್ಯ ಭೂಮಿ ಗಡಿ ಗುರುತಿಸದ ಕಾರಣ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಆರ್.ಟಿ.ಸಿ., ಪೋಡಿ, ಪೌತಿ ಖಾತೆ ಸೇರಿದಂತೆ ಯಾವ ಕಂದಾಯ ಸೇವೆಯೂ ಅವರಿಗೆ ಸಿಗುತ್ತಿಲ್ಲ. ಹೀಗಾಗಿ ಜಂಟಿ ಸರ್ವೆ ಕಾರ್ಯ ಕೈಗೊಳ್ಳಲಾಗಿದೆ. ಕೆಲವೆಡೆ ಕಂದಾಯ ಜಮೀನನ್ನು ಅರಣ್ಯ ಇಲಾಖೆ ನೋಟಿಫಿಕೇಶನ್ ಮಾಡಿರುವುದು ಪತ್ತೆಯಾಗಿದ್ದು, ಈ ಜಮೀನನ್ನು ಡಿನೋಟಿಫಿಕೇಷನ್ ಮಾಡಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.