
ರೈತರ ಕುರಿತಾಗಿ ಸಚಿವ ಬಿ.ಸಿ. ಪಾಟೀಲ್ ನೀಡಿರುವ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತ ಹುಟ್ಟು ಸ್ವಾಭಿಮಾನಿ ಹಾಗೂ ಮರ್ಯಾದಸ್ತ. ಸಾಲ ಕೊಟ್ಟವರು ಬಂದು ಕಿಬ್ಬದಿಯ ಕೀಲು ಮುರಿದಂತೆ ಪೀಡಿಸುವಾಗ ಮರ್ಯಾದೆಗೆ ಅಂಜಿ ದಿಕ್ಕುತೋಚದಂತಾಗದೆ ಆತ್ಮಹತ್ಯೆಗೆ ಶರಣಾಗುತ್ತಾನೆ. ಕೃಷಿ ಸಚಿವರು ಹೇಳಿದಂತೆ ರೈತರು ಹೇಡಿಯಲ್ಲ ಎಂದು ತಿಳಿಸಿದ್ದಾರೆ.
ಹೆಂಡತಿ, ಮಕ್ಕಳು, ನೆಂಟರು, ಊರಿನವರ ಮುಂದೆ ಮರ್ಯಾದೆ ಹೋಯಿತಲ್ಲಾ ಎಂದು ರೈತ ಸಾವಿಗೆ ಶರಣಾಗುತ್ತಾನೆ. ಹೇಡಿತನದ ಪಟ್ಟ ಕಟ್ಟಿಕೊಳ್ಳಲು ಅಲ್ಲ. ಕೃಷಿ ಸಚಿವರ ಹೇಳಿಕೆ ರೈತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ರೈತ ರಾಜಕಾರಣಿಗಳಂತೆ ಅಧಿಕಾರಕ್ಕಾಗಿ ಬಣ್ಣ ಬದಲಿಸುವ ಗೋಸುಂಬೆ ವ್ಯಕ್ತಿತ್ವದವನಲ್ಲ. ನೆಲವನ್ನೆ ನಂಬಿ ಬದುಕುವ ಕಷ್ಟಜೀವಿ. ಅಂತಹ ರೈತ ಸಮುದಾಯಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳು ಬಲ ತುಂಬುವ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕೆ ಹೊರತು ಹೇಡಿ ಎಂಬ ಪಟ್ಟ ಕಟ್ಟಿ ಹೊಣೆಗೇಡಿತನ ಪ್ರದರ್ಶಿಸಬಾರದು ಎಂದು ಹೇಳಿದ್ದಾರೆ.
ಕೃಷಿ ಸಚಿವರು ರೈತ ಸಮುದಾಯದ ವಿರುದ್ಧ ಎಲುಬಿಲ್ಲದ ನಾಲಿಗೆ ಹರಿಬಿಟ್ಟಿರುವುದು ಖಂಡನೀಯ. ರೈತ ಸಮುದಾಯಕ್ಕೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.