ಬೆಂಗಳೂರು : ರಾಜ್ಯದ ಪಡಿತರ ಚೀಟಿದಾರರೇ ಎಚ್ಚರ..! ಕಾಳಸಂತೆಯಲ್ಲಿ ಅಕ್ಕಿ ಮಾರಿದರೆ ರೇಷನ್ ಕಾರ್ಡ್ ರದ್ದಾಗುತ್ತದೆ.ಹೌದು, ಪಡಿತರ ಚೀಟಿದಾರರು ಅಕ್ಕಿಯನ್ನು ಕಾಳಸಂತೆಯಲ್ಲಿ ಮಾಡಿದರೆ ಅವರ ಪಡಿತರ ಚೀಟಿ ರದ್ದುಪಡಿಸಲಾಗುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಫೆಬ್ರವರಿಯಿಂದ ಜಾರಿಗೆ ಬರುವಂತೆ ಡಿಬಿಟಿ ಬದಲು 5 ಕೆಜಿ ಅಕ್ಕಿ ವಿತರಣೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಅಂತೆಯೇ ಫೆಬ್ರವರಿ ತಿಂಗಳ ಅಕ್ಕಿಯನ್ನು ಮಾರ್ಚ್ ನಲ್ಲಿ ವಿತರಿಸಲಾಗುತ್ತಿದೆ. ಇಕೆವೈಸಿ ಮಾಡಿಸಿಕೊಳ್ಳದೇ ಇದ್ದವರು ಇಕೆವೈಸಿ ಮಾಡಿಸಿಕೊಳ್ಳಿ, ಇದಕ್ಕೆ ಯಾವುದೇ ಶುಲ್ಕ ನೀಡುವಂತಿಲ್ಲ ಎಂದು ತಿಳಿಸಿದ್ದಾರೆ.
ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಪಡಿತರ ಚೀಟಿದಾರರು ಒಂದು ಬಾರಿ ತಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ‘ಇಕೆವೈಸಿ’ (ಆಧಾರ್ ಆಧಾರಿತ ಬೆರಳಚ್ಚಿನ ದೃಢೀಕರಣ) ಮಾಡಿಸುವುದು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಕಡ್ಡಾಯವಾಗಿದೆ.
ಆದ್ದರಿಂದ ಯಾರು ಕಳೆದ ಹಲವು ವರ್ಷಗಳಿಂದ ತಮ್ಮ ಬಿಪಿಎಲ್ ಪಡಿತರ ಚೀಟಿಗೆ ಈವರೆಗೆ ಇಕೆವೈಸಿ ನೋಂದಣಿಯಾಗಿಲ್ಲ ಅಂತಹ ಕುಟುಂಬದವರು ತಪ್ಪದೇ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ಇಕೆವೈಸಿ (ಆಧಾರ್ ಆಧಾರಿತ ಬೆರಳಚ್ಚಿನ ದೃಢೀಕರಣ) ಮಾಡಿಸಲು ತಿಳಿಸಿದೆ.