ರಾಜ್ಯ ರಾಜಧಾನಿ ಬೆಂಗಳೂರು, ಅತಿ ವೇಗವಾಗಿ ಬೆಳೆಯುತ್ತಿದ್ದು, ಮೆಟ್ರೋ ಸೇರಿದಂತೆ ವಿವಿಧ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಿದ್ದರೂ ಸಹ ಸಾಕಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಒಂದು ಲಕ್ಷ ಪರಿಸರ ಸ್ನೇಹಿ ಆಟೋಗಳಿಗೆ ಪರ್ಮಿಟ್ ನೀಡಲು ಚಿಂತನೆ ನಡೆಸಲಾಗಿದೆ.
ಬೆಂಗಳೂರು ನಗರದಲ್ಲಿ ಈಗಾಗಲೇ 1.55 ಲಕ್ಷ ಆಟೋಗಳು ಸಂಚರಿಸುತ್ತಿದ್ದು, ಇದಕ್ಕೆ ಇನ್ನೂ ಒಂದು ಲಕ್ಷ ಆಟೋಗಳು ಸೇರ್ಪಡೆಯಾದರೆ ಈ ಸಂಖ್ಯೆ 2.55 ಲಕ್ಷಕ್ಕೆ ಏರಿಕೆಯಾಗಲಿದೆ. ಹೊಸದಾಗಿ ಪರ್ಮಿಟ್ ನೀಡಲಿರುವ ಆಟೋಗಳಲ್ಲಿ ಸಿ ಎನ್ ಜಿ, ಎಲ್ ಪಿ ಜಿ ಅಥವಾ ಎಲೆಕ್ಟ್ರಿಕ್ ಆಟೋಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಈ ಮೂಲಕ ಪರಿಸರಕ್ಕೂ ಹಾನಿಯಾಗದಂತೆ ನೋಡಿಕೊಳ್ಳಲಾಗುತ್ತದೆ.
ಈ ಹಿಂದೆ 2018 ರಲ್ಲಿ 30,000 ಆಟೋಗಳಿಗೆ ಪರ್ಮಿಟ್ ನೀಡಲಾಗಿದ್ದು, ಇದೀಗ ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಒಂದು ಲಕ್ಷ ಆಟೋಗಳಿಗೆ ಪರ್ಮಿಟ್ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಪರ್ಮಿಟ್ ಪಡೆದು ಆಟೋ ಚಲಾಯಿಸುತ್ತಿರುವವರಿಗೆ ಹೊಸ ಪರ್ಮಿಟ್ ನಲ್ಲಿ ಅವಕಾಶವಿರುವುದಿಲ್ಲ ಎಂದು ಹೇಳಲಾಗಿದೆ.