ನವದೆಹಲಿ: ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಮಂಜೂರು ಮಾಡುವುದಿಲ್ಲ ಎಂದು ಕೇಂದ್ರದಿಂದ ಸ್ಪಷ್ಟನೆ ನೀಡಲಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರವು ಯಾವುದೇ ಯೋಜನೆ ಅಡಿಯಲ್ಲಿ ಪರಿಗಣಿಸಿಲ್ಲ. ಹಾಗಾಗಿ ಯೋಜನೆಗೆ ಅನುದಾನ ಮಂಜೂರು ಮಾಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್. ಪಾಟೀಲ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದು, ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಪರಿಗಣಿಸಬೇಕು ಎಂದು ಕರ್ನಾಟಕ ಸರ್ಕಾರ ಅನೇಕ ವರ್ಷಗಳಿಂದ ಒತ್ತಾಯಿಸುತ್ತಿದೆ. ಯೋಜನೆಯ ಮೌಲ್ಯಮಾಪನ ಮಾಡಿರುವ ಸಾರ್ವಜನಿಕ ಹೂಡಿಕೆ ಮಂಡಳಿ 5300 ಕೋಟಿ ರೂ. ಕೇಂದ್ರದ ಅನುದಾನಕ್ಕೆ ಶಿಫಾರಸು ಮಾಡಿದೆ. 2023 -24ರ ಕೇಂದ್ರ ಬಜೆಟ್ ನಲ್ಲಿ ಅನುದಾನ ಒದಗಿಸಲಾಗಿದೆ. ಆದರೆ, ಸಚಿವಾಲಯದ ಚಾಲ್ತಿಯಲ್ಲಿರುವ ಯೋಜನೆಗಳ ಅಡಿಯಲ್ಲಿ ಭಾಗಶಃ ಹಣಕಾಸಿನ ನೆರವಿಗಾಗಿ ಯೋಜನೆಯನ್ನು ಸೇರಿಸಲು ಯೋಜನೆಯ ಪರಿಷ್ಕೃತ ಹಣಕಾಸಿನ ವಿವರಗಳನ್ನು ಒದಗಿಸಬೇಕು ಎಂದು ಹೇಳಿದ್ದಾರೆ.
ಈ ಯೋಜನೆ ಹನಿ ನೀರಾವರಿ ಮೂಲಕ ಬರಪೀಡಿತ ದಾವಣಗೆರೆ, ಚಿಕ್ಕಮಗಳೂರು, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ 2.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಗುರಿ ಹೊಂದಿದ್ದು, ಯೋಜನೆಯ ಮೂಲಕ 367 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಚಿವರ ಗಮನ ಸೆಳೆದಿದ್ದಾರೆ.