ಜಾತಿ – ಧರ್ಮ ಮೀರಿ ಮದುವೆಯಾದವರ ರಕ್ಷಣೆ ಹೊಣೆಯನ್ನು ಆಯಾ ರಾಜ್ಯ ಸರ್ಕಾರಗಳೇ ಹೊರಬೇಕು. ಈ ಮೂಲಕ ಸಂವಿಧಾನ ನೀಡಿರುವ ಹೊಣೆಗಾರಿಕೆಯನ್ನು ನಿಭಾಯಿಸಬೇಕು ಎಂದು ದೆಹಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಅಂತರ್ಜಾತಿ ವಿವಾಹವಾಗಿದ್ದ ದಂಪತಿಗಳ ಪ್ರಕರಣದಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಪೊಲೀಸ್ ಸೇರಿದಂತೆ ಸರ್ಕಾರದ ಅಂಗ ಸಂಸ್ಥೆಗಳು ಕೂಡಾ ಮದುವೆಯಾದವರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಯಾವುದೇ ವಯಸ್ಕ ಯುವಕ – ಯುವತಿ ಜಾತಿ – ಧರ್ಮಗಳನ್ನು ಮೀರಿ ಪರಸ್ಪರ ಒಪ್ಪಿಗೆ ಮೇರೆಗೆ ಮದುವೆಯಾದ ಸಂದರ್ಭದಲ್ಲಿ ಕುಟುಂಬ ಸದಸ್ಯರೂ ಸಹ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ತಿಳಿಸಿದ್ದು, ನಮ್ಮ ಸಂವಿಧಾನ ಕೂಡ ಇದನ್ನೇ ಹೇಳಿದೆ ಎಂದು ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ತುಷಾರ್ ರಾವ್ ಗೆಡೆಲಾ ಹೇಳಿದ್ದಾರೆ.
ಉತ್ತರ ಪ್ರದೇಶದ ಯುವತಿ ವಿಶೇಷ ವಿವಾಹ ಕಾನೂನಿನಡಿ ಜೂನ್ 13ರಂದು ಅಂತರ್ಜಾತಿ ಮದುವೆಯಾಗಿದ್ದು, ಆಕೆಯ ಪೋಷಕರು ರಾಜಕೀಯವಾಗಿ ಬಲಿಷ್ಠರಾಗಿದ್ದ ಕಾರಣ ದಂಪತಿ ರಕ್ಷಣೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಸಂದರ್ಭದಲ್ಲಿ ಮಹತ್ವದ ಆದೇಶ ಹೊರ ಬಿದ್ದಿದೆ.