alex Certify ರೈತರಿಗೆ ಗುಡ್ ನ್ಯೂಸ್: ಕೃಷಿಕರ ಮೇಲಿನ ಎಲ್ಲಾ ಕೇಸ್ ಹಿಂಪಡೆಯಲು ಕೇಂದ್ರ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಗುಡ್ ನ್ಯೂಸ್: ಕೃಷಿಕರ ಮೇಲಿನ ಎಲ್ಲಾ ಕೇಸ್ ಹಿಂಪಡೆಯಲು ಕೇಂದ್ರ ಸಲಹೆ

ನವದೆಹಲಿ: ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಆಂದೋಲನ ಹಿಂತೆಗೆದುಕೊಂಡ ಕೆಲವು ದಿನಗಳ ನಂತರ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು, ರೈತರ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ದಾಖಲಾದ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ರಾಜ್ಯ ಸರ್ಕಾರಗಳು ನಿರ್ಧರಿಸುತ್ತವೆ ಎಂದು ಹೇಳಿದ್ದಾರೆ.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘಗಳ ಕೇಂದ್ರ ಸಂಸ್ಥೆಯಾದ ಎಸ್‌ಕೆಎಂ, ಎಂಎಸ್‌ಪಿ ಕುರಿತು ಸಮಿತಿಯನ್ನು ರಚಿಸುವ ಮತ್ತು ರೈತರ ಮೇಲಿನ ಪ್ರಕರಣಗಳನ್ನು ತಕ್ಷಣವೇ ಹಿಂಪಡೆಯುವ ಭರವಸೆಯೊಂದಿಗೆ ಭಾರತ ಸರ್ಕಾರದಿಂದ ಔಪಚಾರಿಕ ಪತ್ರವನ್ನು ಸ್ವೀಕರಿಸಿದ ನಂತರ ಡಿಸೆಂಬರ್ 9 ರಂದು ಪ್ರತಿಭಟನೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.

ಪ್ರಕರಣಗಳ ಹಿಂಪಡೆಯುವ ವಿಷಯದ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ತೋಮರ್, ಕಾನೂನು ಮತ್ತು ಸುವ್ಯವಸ್ಥೆಯ ವಿಷಯವು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತದೆ, ಆದ್ದರಿಂದ ಅವರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಕಳೆದೊಂದು ವರ್ಷದಿಂದ ರೈತ ಮುಖಂಡರ ಜತೆ ಸಂಪರ್ಕದಲ್ಲಿದ್ದೇನೆ. ನಾನು ಇಂದು ಬೆಳಿಗ್ಗೆ ಕೂಡ ಅವರೊಂದಿಗೆ ಮಾತನಾಡಿದ್ದೇನೆ. ಇದು ಗೆಲುವು ಅಥವಾ ಸೋಲಿನ ಪ್ರಶ್ನೆಯಲ್ಲ ಎಂದು ನಾವು ಹೇಳುತ್ತಿದ್ದೇವೆ. ಅವರೂ ಕೂಡ ಈ ವಿಷಯವನ್ನು ಈ ರೀತಿ ನೋಡಬಾರದು ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಹರಿಯಾಣ ಸರ್ಕಾರಗಳು ರೈತರ ಮೇಲಿನ ಪ್ರಕರಣಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲು ಒಪ್ಪಿಕೊಂಡಿವೆ ಎಂದು ಎಸ್‌ಕೆಎಂಗೆ ಕೇಂದ್ರದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ರೈತರ ವಿರುದ್ಧ ದಾಖಲಾದ ಪ್ರಕರಣಗಳನ್ನು ಸಹ ಹಿಂಪಡೆಯಲಾಗುವುದು ಎಂದು ಹೇಳಲಾಗಿದೆ.

ಪಂಜಾಬ್, ಉತ್ತರ ಪ್ರದೇಶ ಮತ್ತು ಹರಿಯಾಣದ ಸಾವಿರಾರು ರೈತರು ಕಳೆದ ವರ್ಷ ನವೆಂಬರ್‌ನಿಂದ ದೆಹಲಿ ಗಡಿಗಳಾದ ಟಿಕ್ರಿ, ಗಾಜಿಪುರ್ ಮತ್ತು ಸಿಂಘುಗಳಲ್ಲಿ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಪ್ರತಿಭಟಿಸಿದ್ದರು.

ಇದಕ್ಕೂ ಮುನ್ನ ಭಾನುವಾರ, ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಅವರು ಡಿಸೆಂಬರ್ 15 ರೊಳಗೆ ರೈತರು ದೆಹಲಿಯ ಎಲ್ಲಾ ಪ್ರತಿಭಟನಾ ಸ್ಥಳಗಳನ್ನು ತೊರೆಯಲಿದ್ದಾರೆ ಎಂದು ಹೇಳಿದ್ದು, ಪ್ರತಿಭಟನೆಯನ್ನು ಕೊನೆಗೊಳಿಸಲು ಮುಂದಿನ ಮೂರು ದಿನಗಳಲ್ಲಿ ಹರಿಯಾಣ, ಚಂಡೀಗಢ ಮತ್ತು ಅಮೃತಸರಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಎಸ್‌ಕೆಎಂ ತನ್ನ ಮುಂದಿನ ಸಭೆಯನ್ನು ಜನವರಿ 15 ರಂದು ನಡೆಸಲಿದೆ ಎಂದು ಸಂಘಟನೆಯಿಂದ ಮಾಹಿತಿ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...