![](https://kannadadunia.com/wp-content/uploads/2016/06/siddaramaiah_karnatka-CM-23.jpg)
ತುಮಕೂರು : ರಾಜ್ಯ ಸರ್ಕಾರದಿಂದ ಕೊಬ್ಬರಿ ಬೆಳೆಗಾರರಿಗೆ ಕೇಂದ್ರ ಸರ್ಕಾರ ನೀಡುವ ಕನಿಷ್ಠ ಬೆಂಬಲ ಬೆಲೆ 12,000 ರೂ.ಗಳೊಂದಿಗೆ 1500 ರೂ. ಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 3000 ರೂ.ಗಳಿಗೆ ಬೇಡಿಕೆ ಇದ್ದರೂ ಸರ್ಕಾರದ ತನ್ನ ಶಕ್ತ್ಯಾನುಸಾರ ಬೆಂಬಲ ಬೆಲೆ ನೀಡುತ್ತಿದ್ದು, ಎಂ.ಎಸ್.ಪಿ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರ ಎಂದು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಸೋಮವಾರ ರಜೆ ಘೋಷಣೆ ಮಾಡುವುದಿಲ್ಲ. ಮುಜರಾಯಿ ಇಲಾಖೆ ವತಿಯಿಂದ ರಾಜ್ಯದ ದೇಗುಲಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ರಾಮ ದೇವಸ್ಥಾನವನ್ನು ಉದ್ಘಾಟಿಸುತ್ತಿದ್ದೇನೆ ಎಂದರು.
ಟಿಪ್ಪು ಸುಲ್ತಾನರ ಕಾಲದ ಕುಣಿಗಲ್ ಸ್ಟಡ್ ಫಾರಂನ್ನು ಬೆಂಗಳೂರಿನ ಹೃದಯ ಭಾಗದಲ್ಲಿನ ರೇಸ್ ಕೋರ್ಸ್‌ಗೆ ಸ್ಥಳಾಂತರ ಮಾಡಿ ಎಂದು ಸಲಹೆ ನೀಡಿದ್ದೇನೆ. ಕುಣಿಗಲ್ ನಲ್ಲಿ 400 ಏಕರೆಯಷ್ಟು ಜಮೀನು ಇದ್ದು, ಇಲ್ಲಿ 80 ಏಕರೆಯಷ್ಟಿದೆ. ಅಲ್ಲಿ ಸ್ಥಳ ನೀಡುವುದಾಗಿ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.