ಬೆಂಗಳೂರು: ಬೆಂಬಲ ಬೆಲೆ ಯೋಜನೆಯಡಿ ಉಂಡೆ ಕೊಬ್ಬರಿ ಖರೀದಿ ದಿನಾಂಕವನ್ನು ಜೂನ್ 30ರವರೆಗೆ ವಿಸ್ತರಿಸುವಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ.
ಮಾರ್ಚ್ 31ಕ್ಕೆ ಕೊಬ್ಬರಿ ಮಾರಾಟಕ್ಕೆ ನೋಂದಣಿ ಅವಧಿ ಮುಕ್ತಾಯವಾಗಿ ಕೊಬ್ಬರಿ ಖರೀದಿ ಆರಂಭವಾಗಿದ್ದು, ನೋಂದಣಿ ಮಾಡಿಸಿದ ರೈತರು ಜೂನ್ 14ರೊಳಗೆ ಕೊಬ್ಬರಿ ಮಾರಾಟ ಮಾಡಬೇಕಿದೆ. ಆದರೆ, ಇನ್ನೂ ಸುಮಾರು 7 ಸಾವಿರ ರೈತರು ಕೊಬ್ಬರಿ ಮಾರಾಟ ಮಾಡಬೇಕಿರುವುದರಿಂದ ಅವಧಿ ವಿಸ್ತರಿಸಬೇಕೆಂದು ಕೋರಿ ರಾಜ್ಯದಿಂದ ಪತ್ರ ಬರೆಯಲಾಗಿದೆ.
ಕೇಂದ್ರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ನೂತನ ಸಹಕಾರ ಸಚಿವರು ಇದಕ್ಕೆ ಒಪ್ಪಿಗೆ ಸೂಚಿಸಬೇಕಿದೆ. ಒಪ್ಪಿಗೆ ಸೂಚಿಸಿದಲ್ಲಿ ಜೂನ್ 30ರವರೆಗೂ ಕೊಬ್ಬರಿ ಖರೀದಿ ಅವಧಿ ವಿಸ್ತರಣೆಯಾಗಲಿದೆ.