ಬೆಂಗಳೂರು: ಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಪಡೆಯಲು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ ಎಂಬ ನಿಯಮವನ್ನು ರಾಜ್ಯ ಸರ್ಕಾರ ಸಡಿಲಗೊಳಿಸಿದೆ.
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಬಡ್ತಿ ಪಡೆಯಲು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣರಾಗುವುದು ಕಡ್ಡಾಯ ಎನ್ನುವ ನಿಯಮವನ್ನು ಸಡಿಲಗೊಳಿಸಿದ್ದು, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸ್ ಆಗುವುದನ್ನು ಹೊರತುಪಡಿಸಿ ಜೇಷ್ಠತೆ ಹೊಂದಿರುವ ಅಧಿಕಾರಿಗಳು ಮತ್ತು ನೌಕರರು ಉಳಿದೆಲ್ಲ ಅರ್ಹತೆಗಳನ್ನು ಹೊಂದಿದ್ದರೆ ಬರ್ತಿಗೆ ಪರಿಗಣಿಸುವಂತೆ ತಿಳಿಸಲಾಗಿದೆ.
ಕಾನ್ಸ್ಟೇಬಲ್ ಗಳಿಗೆ ಕಂಪ್ಯೂಟರ್ ಸಾಕ್ಷರತಾ ಟೆಸ್ಟ್ ಇಲ್ಲವೆಂದು ಸ್ಪಷ್ಟನೆ ನೀಡಲಾಗಿದೆ. ಪೋಲಿಸ್ ಇಲಾಖೆಯಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ, ಪ್ರೋತ್ಸಾಹ ಧನ ಮಂಜೂರು, ಮುಂಬಡ್ತಿ ನೀಡುವ ಬಗ್ಗೆ ಉಂಟಾದ ಗೊಂದಲ ಪರಿಹರಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ. ಅಲೋಕ್ ಮೋಹನ್ ಸರ್ಕಾರಕ್ಕೆ ಪತ್ರ ಬರೆದು ಸ್ಪಷ್ಟನೆ ಕೇಳಿದ್ದರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧಿಸೂಚನೆಯಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣರಾಗಲು ನಿಗದಿಪಡಿಸಿರುವ ಅವಧಿಯನ್ನು ಕಾಲಕಾಲಕ್ಕೆ ವಿಸ್ತರಿಸಲಾಗುತ್ತಿದೆ ಎಂದು ಹೇಳಲಾಗಿದೆ.