ನವದೆಹಲಿ: ಬರ ಪರಿಹಾರ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪ್ರಮಾಣ ಪತ್ರ ಸಲ್ಲಿಕೆಗೆ ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರ ಕಾಲಾವಕಾಶ ನೀಡಿದೆ.
ಕರ್ನಾಟಕದಲ್ಲಿ ತೀವ್ರ ಬರಗಾಲದಿಂದ ಸಂಕಷ್ಟ ಎದುರಾಗಿದ್ದು, ಪರಿಹಾರ ರೂಪದಲ್ಲಿ 3454 ಕೋಟಿ ರೂಪಾಯಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವು ಕೇಳಿದ್ದಕ್ಕಿಂತ ತೀರಾ ಕಡಿಮೆಯಾಗಿದೆ ಎಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿತ್ತು.
ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ನ್ಯಾಯಪೀಠ ಪ್ರಕರಣದ ವಿಚಾರಣೆ ನಡೆಸಿ ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿದೆ. ರಾಜ್ಯ ಸರ್ಕಾರದ ಪರ ವಕೀಲರಾದ ಕಪಿಲ್ ಸಿಬಲ್ ಮತ್ತು ಡಿ.ಎಲ್. ಚಿದಾನಂದ ಅವರು ಬರ ಪರಿಹಾರ ಬಿಡುಗಡೆಯಾಗಿದೆ. ಆದರೆ ಕುಡಿಯುವ ನೀರು ಸೇರಿದಂತೆ ಕೆಲವು ವಲಯಗಳಲ್ಲಿ ಹಣ ನೀಡಿಲ್ಲ ಎಂದು ತಿಳಿಸಿದ್ದಾರೆ.
ಈಗಾಗಲೇ ಕರ್ನಾಟಕ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿದ್ದು, ಇದಕ್ಕೆ ಸ್ಪಷ್ಟನೆ ನೀಡಲು ಮತ್ತು ಪ್ರಮಾಣ ಪತ್ರ ಸಲ್ಲಿಸಲು ಕಾಲಾವಕಾಶ ಬೇಕಿದೆ ಎಂದು ಕೇಂದ್ರದ ಪರ ವಕೀಲರ ಮನವಿ ಮಾಡಿದಾಗ ನಾಲ್ಕು ವಾರ ಅವಕಾಶ ನೀಡಲಾಗಿದೆ.