ಬೆಂಗಳೂರು : ಸಮುದಾಯದ ಮುಖಂಡರ ಜೊತೆ ಜಯಂತಿ ಆಚರಿಸುವಂತೆ ರಾಜ್ಯ ಸರ್ಕಾರ ( Karnataka Government ) ಆದೇಶ ಹೊರಡಿಸಿದೆ.
ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಚರಿಸಲಾಗುತ್ತಿರುವ ಮಹಾಪುರುಷರ ಜಯಂತಿಗಳನ್ನು ಮಾರ್ಗಸೂಚಿಗಳನ್ವಯ ಆಯಾ ಜಯಂತಿಗೆ ಸಂಬಂಧಿಸಿದಂತೆ ಆಯಾ ಸಮಾಜಗಳ/ಸಮುದಾಯಗಳ ಮುಖಂಡರು ಮತ್ತು ಸಂಘ ಸಂಸ್ಥೆಯ ಪದಾಧಿಕಾರಿಗಳನ್ನು ಸಭೆಗೆ ಆಹ್ವಾನಿಸಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಾಗಿರುತ್ತದೆ.
ತಾಲೂಕು ಮಟ್ಟದಲ್ಲಿ ಆಚರಿಸುತ್ತಿರುವ ಜಯಂತಿ ಕಾರ್ಯಕ್ರಮಗಳನ್ನು ಸಂಬಂಧಪಟ್ಟ ತಹಶೀಲ್ದಾರುಗಳು ಯಾವುದೇ ಪೂರ್ವಭಾವಿ ಸಭೆ ನಡೆಸದೇ, ಸಮುದಾಯದ ಮುಖಂಡರನ್ನು ಆಹ್ವಾನಿಸದೇ ನೆಪಮಾತ್ರಕ್ಕೆ, ಆಚರಿಸುತ್ತಿರುವುದಾಗಿ ಹಲವಾರು ದೂರುಗಳು ಬಂದಿದ್ದು, ಈ ಬಗ್ಗೆ ತಮ್ಮ ವ್ಯಾಪ್ತಿಯಲ್ಲಿನ ತಹಶೀಲಾರ್ಗಳಿಗೆ ಕಟ್ಟುನಿಟ್ಟಾಗಿ ಸರ್ಕಾರದ ಆದೇಶಗಳು ಹಾಗೂ ಮಾರ್ಗಸೂಚಿಯನ್ವಯ ಎಲ್ಲಾ ಜಯಂತಿಗಳನ್ನು ಆಚರಣೆ ಮಾಡುವಂತೆ ಸೂಚನೆ ನೀಡಬೇಕೆಂದು ಆದೇಶ ಹೊರಡಿಸಿದ್ದಾರೆ.
ಮುಂದುವರೆದು, ವಿವಿಧ ಜಿಲ್ಲೆಗಳಲ್ಲಿ ಜಯಂತಿ ಆಚರಿಸಲು ಹಾಗೂ ರಾಜ್ಯ ಮಟ್ಟದ ಜಯಂತಿ ಕಾರ್ಯಕ್ರಮಕ್ಕೆ ಆಯಾ ಜಿಲ್ಲಾಧಿಕಾರಿಗಳಿಗೆ ರೂ.5.00 ಲಕ್ಷ (ಐದು ಲಕ್ಷ ರೂಪಾಯಿ ಗಳು ಮಾತ್ರ)ಗಳು, ಜಿಲ್ಲಾಮಟ್ಟದ ಜಯಂತಿ ಆಚರಣೆಗೆ ರೂ.50,000/- (ಐವತ್ತು ಸಾವಿರ ರೂಪಾಯಿಗಳು ಮಾತ್ರ ಮತ್ತು ತಾಲ್ಲೂಕು ಮಟ್ಟದ ಆಚರಣೆಗೆ ರೂ. 20,000/- (ಇಪ್ಪತ್ತು ಸಾವಿರ ರೂಪಾಯಿಗಳು ಮಾತ್ರ) ಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಿದ್ದಾರೆ.