
ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡದ ಮೊತ್ತ ಪಾವತಿಗೆ ಶೇಕಡ 50ರಷ್ಟು ವಿನಾಯಿತಿ ನೀಡಿ ಮತ್ತೊಮ್ಮೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.
ಶುಕ್ರವಾರ ಅಧಿಕೃತ ಆದೇಶ ಹೊರಡಿಸಿದ್ದು, ಫೆಬ್ರವರಿ 11ರೊಳಗೆ ದಾಖಲಾದ ಪ್ರಕರಣಗಳಿಗೆ ಅನ್ವಯವಾಗುವಂತೆ ಮಾರ್ಚ್ 4 ರಿಂದ 18ರವರೆಗೆ 15 ದಿನಗಳ ಕಾಲ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡಪಾವತಿಗೆ ಶೇಕಡ 50ರಷ್ಟು ರಿಯಾಯಿತಿ ನೀಡಲಾಗಿದೆ.
ಕಳೆದ ಜನವರಿಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡಪಾವತಿಗೆ ಶೇಕಡ 50ರಷ್ಟು ವಿನಾಯಿತಿ ನೀಡುವ ಕುರಿತು ನಿರ್ಣಯ ಕೈಗೊಂಡಿತ್ತು. ಸರ್ಕಾರ ಒಂದು ಬಾರಿಗೆ ಅನ್ವಯವಾಗುವಂತೆ ಬಾಕಿ ದಂಡ ಪಾವತಿಗೆ ಶೇ. 50 ರಷ್ಟು ರಿಯಾಯಿತಿ ನೀಡಿತ್ತು. 9 ದಿನದಲ್ಲಿ 41.20 ಲಕ್ಷ ಪ್ರಕರಣಗಳಿಂದ 120.76 ಕೋಟಿ ರೂ. ಸಂಗ್ರಹವಾಗಿತ್ತು.