![](https://kannadadunia.com/wp-content/uploads/2020/11/vidhana-soudha-750-1-jpg_710x400xt-1.jpg)
ಬೆಂಗಳೂರು : ರೈತರ ಎಲ್ಲಾ ಬೆಳೆಗಳಿಗೂ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಲು ಶಾಸನ ರೂಪಿಸುವಂತೆ ಹಾಗೂ ರೈತರೊಂದಿಗೆ ಸಂಘರ್ಷದ ಹಾದಿ ತುಳಿಯದೇ ನ್ಯಾಯಯುತವಾದ ಅವರ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆಯಲ್ಲಿ ನಿರತರಾಗಿರುವ ದೇಶದ ರೈತರ ಅಹವಾಲುಗಳನ್ನು ಆಲಿಸಿ, ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಶಾಸನ ರೂಪಿಸುವಂತೆ ಒತ್ತಾಯಿಸಿ ಸದನವು ನಿರ್ಣಯ ಕೈಗೊಂಡಿದೆ ಎಂದರು.
ರೈತರು ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆ ನಿಗದಿಯಾಗಬೇಕೆಂಬುದು ಭಾರತ ದೇಶದ ಪ್ರತಿಯೊಬ್ಬ ರೈತನ ಆಶಯ. ಈ ಸದಾಶಯವನ್ನು ಅನುಷ್ಠಾನಗೊಳಿಸಬೇಕೆಂದು ಮತ್ತು ಕೃಷಿಯನ್ನು ಲಾಭದಾಯಕಗೊಳಿಸಬೇಕೆಂಬುದು ಎಲ್ಲಾ ಜನಪರ ಪ್ರಜಾಸತ್ತಾತ್ಮಕ ನಾಗರೀಕ ಸರ್ಕಾರಗಳ ಒತ್ತಾಸೆಯಾಗಿದೆ. ರೈತರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದ ಡಾ. ಎಂ.ಎಸ್. ಸ್ವಾಮಿನಾಥನ್ ವರದಿಯನ್ವಯ ಕೃಷಿಕನ ಸಾಗುವಳಿ ವೆಚ್ಚದ ಶೇ.50% ರಷ್ಟನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಬೇಕೆಂದು ತನ್ಮೂಲಕ ಹಸಿರು ಕ್ರಾಂತಿಯನ್ನು ಸಾಧಿಸಿ ರಾಷ್ಟ್ರದಲ್ಲಿ ಕೃಷಿಯನ್ನು ಅವಲಂಬಿತ ಉದ್ಯೋಗವನ್ನಾಗಿ ನಿರೀಕ್ಷಿಸಬಹುದೆಂಬ ನಿರೀಕ್ಷೆಯನ್ನು ಸಾಧಿಸುವಲ್ಲಿ ಪ್ರಗತಿಯನ್ನು ಸಾಧಿಸಿಲ್ಲ ಅಥವಾ ನಿರೀಕ್ಷಿತ ಮಟ್ಟದಲ್ಲಿ ಬದಲಾವಣೆಯನ್ನು ತರುವಲ್ಲಿ ವಿಫಲವಾಗಿವೆ ಎಂದು ಹೇಳಿದರು.
ಎಲ್ಲಾ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಲಾಭಾಂಶದ ಬೆಂಬಲ ಬೆಲೆಯನ್ನು ಸುನಿಶ್ಚಿತಗೊಳಿಸುವ (ಗ್ಯಾರಂಟಿ) ಮತ್ತು ರೈತನ ಉತ್ಪನ್ನಗಳ ಬೆಲೆಯನ್ನು ಸ್ವಾಮಿನಾಥನ್ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ನಿರ್ಧರಿಸುವಂತೆ” ಒತ್ತಾಯಿಸಿ, ಭಾರತದಾದ್ಯಂತ ರೈತರು ಚಳುವಳಿ, ಆಂದೋಲನ ಮತ್ತು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.
ರಾಷ್ಟ್ರದ ಅನ್ನದಾತರೆನ್ನಿಸಿಕೊಳ್ಳುವ ಮತ್ತು ಅರ್ಥವ್ಯವಸ್ಥೆಯ ಸರ್ವಾಂಗೀಣ ಅಭಿವೃದ್ಧಿಯ ಬೇರ್ಪಡಿಸಲಾಗದ ಭಾಗವಾಗಿರುವ ಕೃಷಿಕರ ಆದಾಯವನ್ನು ಸಂರಕ್ಷಿಸುವ ತನ್ಮೂಲಕ ಕೃಷಿಯನ್ನು ಲಾಭದಾಯಕಗೊಳಿಸುವ ಉದ್ದೇಶದಿಂದ ವಾಣಿಜ್ಯ ಬೆಳೆಗಳಿಗೆ ಬೆಲೆ ನಿಗದಿಪಡಿಸುವ ಮಾನದಂಡವನ್ನು ಇತರೆ ಕೃಷಿ ಉತ್ಪನ್ನಗಳಿಗೂ ಅನುಸರಿಸುವ ಕ್ರಮಗಳನ್ನು ಕರ್ನಾಟಕ ಬೆಂಬಲಿಸುತ್ತಲೇ ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಕ್ರಮಗಳು ರೈತ ವಿರೋಧಿ ನೀತಿಯಾಗಿ ರೈತನಿಗೆ ಕನಿಷ್ಠ ಬೆಂಬಲ ಬೆಲೆ ದೊರಕದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿವೆ.
ಈ ಹಿನ್ನೆಲೆಯಲ್ಲಿ ರೈತರ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕೇಂದ್ರ Bharatiya Janata Party (BJP) ಸರಕಾರ ಶಾಸನ ರೂಪಿಸುವಂತೆ ಈ ಸದನ ಒಕ್ಕೂರಲಿನಿಂದ ಒತ್ತಾಯಿಸುತ್ತದೆ. ರೈತರೊಂದಿಗೆ ಸಂಘರ್ಷದ ಹಾದಿ ತುಳಿಯದೇ ಅತ್ಯಂತ ನ್ಯಾಯಯುತವಾದ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಸದನ ಒತ್ತಾಯಿಸುತ್ತದೆ ಎಂದರು.
![](https://kannadadunia.com/wp-content/uploads/2024/02/WhatsApp-Image-2024-02-23-at-5.44.59-AM.jpeg)