ಬೆಂಗಳೂರು: ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಹರಡುವವರ ಪತ್ತೆಗಾಗಿ ರಾಜ್ಯ ಸರ್ಕಾರ ‘ಮಾಹಿತಿ ತಿರುಚುವಿಕೆ ಪತ್ತೆ ಘಟಕ’ ರಚಿಸಲಾಗುತ್ತಿದೆ. ಇದರ ಕಾರ್ಯನಿರ್ವಹಣೆಗಾಗಿ ಐದು ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.
ಗೌರಿ ಮೀಡಿಯಾ ಟ್ರಸ್ಟ್, ಲಾಜಿಕಲಿ ಇನ್ಫೋ ಮೀಡಿಯಾ ಪ್ರೈವೇಟ್ ಲಿಮಿಟೆಡ್, ಟ್ರೈಲೈಕ್ ಟೆಕ್ನಾಲಜಿ ಲಿಮಿಟೆಡ್, ನ್ಯೂಸ್ ಪ್ಲಸ್ ಕಮ್ಯೂನಿಕೇಷನ್, OW ಡಾಟಾ ಲೀಡ್ಸ್ ಸಂಸ್ಥೆಗಳನ್ನು ಸಾಮಾಜಿಕ ಮಾಧ್ಯಮ, ಜಾಲತಾಣಗಳಲ್ಲಿನ ಸುಳ್ಳು ಸುದ್ದಿ ಪತ್ತೆಗೆ ಆಯ್ಕೆ ಮಾಡಲಾಗಿದೆ.
ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಅಧೀನದಲ್ಲಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ನೇತೃತ್ವದಲ್ಲಿ ‘ಮಾಹಿತಿ ತಿರುಚುವಿಕೆ ಪತ್ತೆ ಘಟಕ’ ಕಾರ್ಯ ನಿರ್ವಹಿಸಲಿದ್ದು, ಶೀಘ್ರವೇ ಕಾರ್ಯಾರಂಭ ಮಾಡಲಿದೆ.
ಘಟಕದೊಂದಿಗೆ ಕೆಲಸ ಮಾಡಲು ಅರ್ಹ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ದೇಶದ ಅನೇಕ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಅವುಗಳಲ್ಲಿ 5 ಸಂಸ್ಥೆಗಳನ್ನು ಸುಳ್ಳು ಸುದ್ದಿ ಪತ್ತೆಗೆ ಆಯ್ಕೆ ಮಾಡಲಾಗಿದೆ.