ಬೆಂಗಳೂರು: ರೈತರ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ 324 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದೆ. ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಮಂಜೂರಾತಿ ನೀಡಲಾಗಿದ್ದು, ಕೇಂದ್ರ ಸರ್ಕಾರದ ಪರಿಹಾರ ಇನ್ನು ಬಾಕಿ ಇದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಸರ್ಕಾರ ಯಾವುದೇ ಪರಿಹಾರ ನಿಧಿ ಬಿಡುಗಡೆ ಮಾಡಿದ ಬಗ್ಗೆ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 2023 -24ನೇ ಸಾಲಿನ ಬರ ಪರಿಹಾರಕ್ಕಾಗಿ 324 ಕೋಟಿ ರೂ. ಬಿಡುಗಡೆ ಮಾಡಿ ಆದೇಶಿಸಿದೆ.
ರಾಜ್ಯದ 31 ಜಿಲ್ಲೆಗಳ 216 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದೆ. 35,000 ಕೋಟಿ ರೂ. ಮೌಲ್ಯದ ಬೆಳೆ ಹಾನಿಯಾಗಿರುವುದಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಪರಿಹಾರಕ್ಕೆ ಮನವಿ ಮಾಡಲಾಗಿದೆ. ರಾಜ್ಯದಲ್ಲಿ ಬರ ಅಧ್ಯಯನ ತಂಡ ಪರಿಶೀಲಿಸಿ ವರದಿ ನೀಡಿದ್ದು, ಕೇಂದ್ರದಿಂದ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ವಿಸ್ತೀರ್ಣ ಹಾಗೂ ತೀವ್ರ ಬರ ಆಧಾರದ ಮೇಲೆ ಬೆಳಗಾವಿ ಜಿಲ್ಲೆಗೆ 22.5 ಕೋಟಿ ರೂ., ವಿಜಯಪುರ ಜಿಲ್ಲೆಗೆ 18 ಕೋಟಿ ರೂ., ಕಲಬುರಗಿ, ಉತ್ತರ ಕನ್ನಡ ಜಿಲ್ಲೆಗಳಿಗೆ ತಲಾ 16.5 ಕೋಟಿ ರೂ., ತುಮಕೂರು ಜಿಲ್ಲೆಗೆ 15 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಉಳಿದ ಜಿಲ್ಲೆಗಳಿಗೂ ಬರ ಪರಿಹಾರ ಬಿಡುಗಡೆ ಮಾಡಲಾಗಿದೆ.