ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಜೊತೆಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. 7ನೇ ವೇತನ ಆಯೋಗದಿಂದ ಇಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ರಾಜ್ಯ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆಯಾಗಿರುವ ವಾರದಲ್ಲಿ ಐದು ದಿನ ಕೆಲಸ, ಎರಡು ದಿನ ರಜೆ ಪದ್ಧತಿ ಜಾರಿಗೆ ಒಪ್ಪಿಗೆ ನೀಡಲಾಗಿದೆ.
ಸರ್ಕಾರಿ ನೌಕರರ ಕಾರ್ಯಕ್ಷಮತೆ ಹೆಚ್ಚಿಸಲು ವಾರದಲ್ಲಿ ಐದು ದಿನ ಕೆಲಸ ಪದ್ಧತಿ ಜಾರಿಗೆ ತರುವಂತೆ 7ನೇ ವೇತನ ಆಯೋಗದ ವರದಿಯಲ್ಲಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಖಾಸಗಿ ಕಂಪನಿಗಳು, ಬಹು ರಾಷ್ಟ್ರೀಯ ಕಂಪನಿಗಳು, ಐಟಿ, ಬಿಟಿ ಸಂಸ್ಥೆಗಳಲ್ಲಿ ವಾರದಲ್ಲಿ ಐದು ದಿನ ಕೆಲಸ, ಎರಡು ದಿನ ರಜೆ ಇರುವಂತೆ ಸರ್ಕಾರಿ ನೌಕರರಿಗೂ ಐದು ದಿನ ಕೆಲಸ, ಎರಡು ದಿನ ರಜೆ ಪದ್ದತಿಗೆ ಹಲವು ವರ್ಷಗಳಿಂದ ನೌಕರರು ಬೇಡಿಕೆ ಇಟ್ಟಿದ್ದಾರೆ.
ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇದೆ. ನೌಕರರ ಒತ್ತಡ ಕಡಿಮೆ ಮಾಡಲು, ಕೆಲಸದಲ್ಲಿ ಕಾರ್ಯ ದಕ್ಷತೆ ಹೆಚ್ಚಿಸಲು ಭಾನುವಾರ ರಜೆ ನೀಡುವಂತೆ ನೌಕರರ ವಲಯದಿಂದ ಒತ್ತಾಯಿಸಿದ ಹಿನ್ನೆಲೆಯಲ್ಲಿ 7ನೇ ವೇತನ ಆಯೋಗ ಸ್ಪಂದಿಸಿದ್ದು, ಈ ಪದ್ಧತಿ ಅನುಷ್ಠಾನಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.