ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಆರೋಪಗಳ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಭಾನುವಾರ ಆಯೋಗ ರಚಿಸಿ ಆದೇಶ ಹೊರಡಿಸಿದೆ.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ನೇತೃತ್ವದ ವಿಚಾರಣಾ ಆಯೋಗ ರಚಿಸಿ ರಾಜ್ಯ ಸರ್ಕಾರ ಭಾನುವಾರ ಆದೇಶ ಹೊರಡಿಸಿದೆ. ಸೋಮವಾರದಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದ್ದು, ಸರ್ಕಾರದ ವಿರುದ್ಧ ಮುಡಾ ಅಕ್ರಮದ ಅಸ್ತ್ರ ಪ್ರಯೋಗಿಸಲು ಪ್ರತಿಪಕ್ಷಗಳು ಸಜ್ಜಾಗಿದೆ.
ಇದೇ ಸಂದರ್ಭದಲ್ಲಿ ಸರ್ಕಾರ ಆಯೋಗ ರಚಿಸಿದೆ. ಮುಡಾ ನಿವೇಶನ ಅಕ್ರಮ ಆರೋಪ ಕುರಿತು ಪಿ.ಎನ್. ದೇಸಾಯಿ ನೇತೃತ್ವದ ವಿಚಾರಣಾ ಆಯೋಗ ಸಮಗ್ರ ತನಿಖೆ ನಡೆಸಬೇಕು. ಮುಂದಿನ ಆರು ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.
ವಿಚಾರಣಾ ಆಯೋಗಕ್ಕೆ ಸಮಗ್ರ ದಾಖಲೆಗಳು, ತಾಂತ್ರಿಕ ಸಲಹೆಗಾರರು, ಆಡಳಿತಾತ್ಮಕ ಸಲಹೆಗಾರರನ್ನು ಕಲ್ಪಿಸಲು ನಗರಾಭಿವೃದ್ಧಿ ಇಲಾಖೆ ಮತ್ತು ಮುಡಾ ಸಹಕರಿಸಬೇಕು ಎಂದು ತಿಳಿಸಲಾಗಿದೆ.