ಬೆಂಗಳೂರು: ಪ್ರವಾಹ, ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ನಿಗದಿಪಡಿಸಲಾದ ದರಕ್ಕಿಂತ ಹೆಚ್ಚುವರಿಯಾಗಿ ಪರಿಷ್ಕೃತ ದರದಲ್ಲಿ ಪರಿಹಾರ ಪಾವತಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜೂನ್ 1 ರಿಂದ ಸೆಪ್ಟೆಂಬರ್ 30ರವರೆಗೆ ಪ್ರಸಕ್ತ ಮುಂಗಾರು ಅವಧಿಗೆ ಅನ್ವಯವಾಗುವಂತೆ ಕೇಂದ್ರದ SDRF/NDRF ಮಾರ್ಗಸೂಚಿಯಲ್ಲಿ ನಿಗದಿಪಡಿಸಲಾದ ಪರಿಹಾರಕ್ಕಿಂತ ಸಂತ್ರಸ್ತ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ಮೊತ್ತ ನಿಗದಿ ಮಾಡಲಾಗಿದೆ. ಪರಿಷ್ಕೃತ ದರದಲ್ಲಿ ನೆರೆ ಸಂತ್ರಸ್ತರಿಗೆ ನಿಗದಿತ ಷರತ್ತುಗಳ ಅನ್ವಯ ಪರಿಹಾರ ಪಾವತಿಸುವಂತೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಲು ಸೂಚಿಸಲಾಗಿದೆ.
ಶೇ. 75 ಕ್ಕಿಂತ ಹೆಚ್ಚು ಹಾನಿಗೊಳಗಾದ ಮನೆಗಳಿಗೆ(ಎ ವರ್ಗ) 5 ಲಕ್ಷ ರೂ., ಶೇಕಡ 25 ರಿಂದ ಶೇಕಡ 75ರಷ್ಟು ಹಾನಿಯಾದ ಮನೆಗಳಿಗೆ(ಬಿ -1 ವರ್ಗ ದುರಸ್ತಿಗೆ) 3 ಲಕ್ಷ ರೂ., ಶೇಕಡ 25 ರಿಂದ ಶೇಕಡ 75 ರಷ್ಟು ಹಾನಿಯಾದ(ಬಿ-2 ವರ್ಗ ಕೆಡವಿ ನಿರ್ಮಾಣ) 5 ಲಕ್ಷ ರೂಪಾಯಿ, ಶೇಕಡ 15 ರಿಂದ ಶೇಕಡ 25 ರಷ್ಟು ಹಾನಿಯಾದ ಮನೆಗಳಿಗೆ (ಸಿ – ವರ್ಗ) 50,000 ರೂ. ಪರಿಹಾರ ನೀಡಲಾಗುವುದು.