ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೆ ಅಲೆ ತೀವ್ರ ಆತಂಕವನ್ನುಂಟುಮಾಡಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿ ಮಾಡುವ ಸಾಧ್ಯತೆ ಇದೆ.
ಈ ಸಂಬಂಧ ಏಪ್ರಿಲ್ 18 ರಂದು ಮಹತ್ವದ ಸಭೆ ನಡೆಯಲಿದೆ. ಉಪ ಚುನಾವಣೆ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ವಪಕ್ಷ ಸಭೆ ಕರೆದಿದ್ದಾರೆ. ಈ ವಾರದಲ್ಲಿ ಸೋಂಕು ನಿಯಂತ್ರಣಕ್ಕೆ ಬರದಿದ್ದರೆ ಪ್ರಧಾನಿಯವರೊಂದಿಗೆ ಮಾತುಕತೆ ನಡೆಸಲಾಗುವುದು. ಜನ ಸಹಕರಿಸದಿದ್ದರೆ ಕಠಿಣ ಕ್ರಮ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಮೂರು ಕ್ಷೇತ್ರಗಳ ಮತದಾನ ಮುಗಿದ ಬೆನ್ನಲ್ಲೇ ವಾರಾಂತ್ಯ ಲಾಕ್ ಡೌನ್ ಜಾರಿಗೊಳಿಸುವ ಸಾಧ್ಯತೆ ಇದೆ. ಆರ್ಥಿಕತೆಗೆ ಪೆಟ್ಟು ಬೀಳುವ ಕಾರಣ ಸಂಪೂರ್ಣ ಲಾಕ್ಡೌನ್ ಜಾರಿಮಾಡದೆ ವಾರಾಂತ್ಯ ಲಾಕ್ ಡೌನ್ ಮಾಡಬಹುದೆಂದು ಹೇಳಲಾಗಿದೆ. ಆದರೆ, ಸೋಂಕು ನಿಯಂತ್ರಣಕ್ಕೆ ಬರದಿದ್ದರೆ ಸರ್ವಪಕ್ಷ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ಸಂಪೂರ್ಣ ಲಾಕ್ ಡೌನ್ ಮಾಡಬಹುದೆಂದು ಹೇಳಲಾಗಿದೆ.