ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ ವಾರ್ಡ್ ವಾರು ಮತದಾರರ ಪಟ್ಟಿ ಸಿದ್ಧಪಡಿಸಲು ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದೆ.
ಹೀಗಾಗಿ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳ ಮತದಾರರು, ಪಟ್ಟಿ ಸಿದ್ಧತೆ, ಮತಗಟ್ಟೆಗಳ ಸಂಖ್ಯೆ ಹೆಚ್ಚಳ ಮತ್ತಿತರ ವಿಷಯಗಳ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರು ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಶುಕ್ರವಾರ ಮತದಾರರ ಪಟ್ಟಿ ತಯಾರಿಕೆ ಸಂಬಂಧ ನಡೆದ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಸದ್ಯ ವಿಧಾನಸಭೆ ಮತದಾರರ ಪಟ್ಟಿ ಅಳವಡಿಕೆ ಮಾಡಿಕೊಂಡು ಮಹಾನಗರ ಪಾಲಿಕೆ ವಾರ್ಡ್ ವಾರು ಮತದಾರರ ಪಟ್ಟಿ ತಯಾರಿಸಲು ಸೂಚಿಸಲಾಗಿದೆ. ಮಹಾನಗರ ಪಾಲಿಕೆ ಆಯುಕ್ತರನ್ನು ಚುನಾವಣಾ ಆಯೋಗ ಅಧಿಕಾರಿ ಎಂದು ಅಧಿಸೂಚಿಸಿ ಮತದಾರರ ಪಟ್ಟಿ ಸಿದ್ಧಪಡಿಸಲು ಆದೇಶ ಹೊರಡಿಸಿದೆ.
ಪ್ರತಿ ವಾರ್ಡ್ ಮತದಾರರನ್ನು, ಮತಗಟ್ಟೆಗಳನ್ನು ಗುರುತಿಸಿ ಪ್ರತ್ಯೇಕ ಮತಗಟ್ಟೆ ಸಂಖ್ಯೆ, ಮತದಾರರ ಪಟ್ಟಿ, ಭಾಗ ಸಂಖ್ಯೆ ನೀಡಲು ತಿಳಿಸಲಾಗಿದೆ. ಆಗಸ್ಟ್ 31ರವರೆಗೆ ಮತದಾರರ ಪಟ್ಟಿಯಲ್ಲಿ ಮತದಾರರನ್ನು ಗುರುತಿಸಿ ಪಟ್ಟಿ ತಯಾರಿಸಿ ಮುದ್ರಕರಿಗೆ ನೀಡಲಿದ್ದು, ಸೆಪ್ಟಂಬರ್ 4ರಂದು ನೀಡಿದ ಪಟ್ಟಿಯಂತೆ ಕರಡು ಪಟ್ಟಿಯನ್ನು ಪಡೆದು ಸೆಪ್ಟಂಬರ್ 10ರಂದು ಮತ್ತೊಮ್ಮೆ ಪರಿಶೀಲಿಸಿ ಅಳವಡಿಸಲಾಗುವುದು. ಸೆಪ್ಟೆಂಬರ್ 17ರಂದು ಮತದಾರರ ಪಟ್ಟಿಯ ಕರಡು ಪ್ರಕಟಿಸಲಾಗುವುದು. ಸೆಪ್ಟೆಂಬರ್ 24 ರೊಳಗೆ ಆಕ್ಷೇಪಣೆ ಸಲ್ಲಿಸಬೇಕಿದೆ. ಸೆಪ್ಟೆಂಬರ್ 30ರಂದು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿ ಅಕ್ಟೋಬರ್ 6ವರೆಗೆ ವಾರ್ಡ್ ಗಳ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಿ ಅ. 9 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು.