ಮೈಸೂರು: ಮೈಸೂರು ಮಹಾನಗರ ಪಾಲಿಕೆ ಸೇರಿ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಶೀಘ್ರವೇ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯಷ್ಟೇ ಆಯೋಗದ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದು, ಸಾಕಷ್ಟು ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಸುಪ್ರೀಂ ಕೋರ್ಟ್, ಹೈಕೋರ್ಟ್ ನಲ್ಲಿ ವ್ಯಾಜ್ಯಗಳಿವೆ. ಕೆಲವು ನ್ಯಾಯಾಲಯಗಳಲ್ಲಿ ಜಾತಿ ಮೀಸಲು ಪಟ್ಟಿ ಪ್ರಕಟ, ವಾರ್ಡ್ ಮರು ವಿಂಗಡಣೆಯಂತಹ ವ್ಯಾಜ್ಯಗಳಿದ್ದು, ಅವುಗಳನ್ನು ಶೀಘ್ರವೇ ವಿಲೇವಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
ನಾಲ್ಕು ವರ್ಷಗಳ ಹಿಂದೆಯೇ ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ, ಕೋರ್ಟ್ ನಲ್ಲಿ ಕೇಸ್ ಇದ್ದ ಕಾರಣ ಚುನಾವಣೆ ನಡೆಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ.
ಜುಲೈ 30 ರಂದು ಬಿಬಿಎಂಪಿ ಚುನಾವಣೆ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ಬರಲಿದೆ. ತೀರ್ಪಿನ ನಂತರ ಚುನಾವಣೆ ನಡೆಸುವ ಬಗ್ಗೆ ಆಯೋಗ ತೀರ್ಮಾನಿಸಲಿದೆ. ಗ್ರೇಟರ್ ಬೆಂಗಳೂರು ನಿರ್ಣಯದಿಂದ ಚುನಾವಣೆಗೆ ಯಾವುದೇ ತೊಡಕಿಲ್ಲ ಎಂದು ಅವರು ಹೇಳಿದ್ದಾರೆ.