ಬೆಂಗಳೂರು: ಆಸ್ತಿ ಘೋಷಣೆ ಮಾಡದ ಆರು ಮಂದಿ ಗ್ರಾಮ ಪಂಚಾಯಿತಿ ಸದಸ್ಯರ ಸದಸ್ಯತ್ವವನ್ನು ರಾಜ್ಯ ಚುನಾವಣಾ ಆಯೋಗ ರದ್ದುಗೊಳಿಸಿದೆ. ಸದಸ್ಯತ್ವ ರದ್ದುಗೊಂಡ ಸದಸ್ಯ ಸ್ಥಾನಗಳನ್ನು ಖಾಲಿ ಎಂದು ಘೋಷಿಸಲಾಗಿದೆ.
ಆಸ್ತಿ ವಿವರ ನೀಡುವಂತೆ ಈ ಸದಸ್ಯರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಯಾವುದೇ ಉತ್ತರ ನೀಡದ ಕಾರಣ ಸದಸ್ಯತ್ವ ರದ್ದು ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ಅತ್ತಿಕೂಡಿಗೆ ಗ್ರಾಪಂ ಚೈತ್ರ ರಘು, ಅಜ್ಜಂಪುರ ತಾಲೂಕು ಸೊಕ್ಕೆ ಗ್ರಾಪಂನ ಎಸ್.ಹೆಚ್. ಚಂದ್ರಶೇಖರ, ಕಲಬುರಗಿ ಜಿಲ್ಲೆ ಆಳಂದ ತಾಲೂಕು ಅಳಂಗಾ ಗ್ರಾಪಂನ ಗಣಪತಿ, ಕಮಲಾಪುರ ತಾಲೂಕು ವಿ.ಕೆ. ಸಲಗರ ಗ್ರಾಮ ಪಂಚಾಯಿತಿಯ ಇಸ್ಮಾಯಿಲ್ ಖಾನ್, ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಚಿಕ್ಕಾಂಶಿ ಹೊಸೂರು ಗ್ರಾಮ ಪಂಚಾಯಿತಿಯ ಮಂಜುಳಾ ರಾಜಪ್ಪ, ಕೊಡಗು ಜಿಲ್ಲೆ, ಮಡಿಕೇರಿ ತಾಲೂಕು ಕಳಕೇರಿ ಗ್ರಾಮ ಪಂಚಾಯಿತಿಯ ಬಿ.ವಿ. ಪ್ರಮೀಳಾ ಅವರನ್ನು ಗ್ರಾಮ ಪಂಚಾಯತಿ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳಡಿ ಆಸ್ತಿ ಘೋಷಣೆ ಮಾಡಿಕೊಳ್ಳದ ಸದಸ್ಯರ ಸದಸ್ಯತ್ವ ರದ್ದತಿಗೆ ಅವಕಾಶವಿದ್ದು, ಈ ಕಾಯ್ದೆ ಬಳಸಿಕೊಂಡು ರಾಜ್ಯ ಚುನಾವಣಾ ಆಯೋಗ ಆರು ಮಂದಿ ಸದಸ್ಯರನ್ನು ಅನರ್ಹಗೊಳಿಸಿದೆ. ಈ ಸದಸ್ಯ ಸ್ಥಾನಗಳು ಖಾಲಿ ಎಂದು ಘೋಷಣೆ ಮಾಡಲಾಗಿದೆ.