ಬೆಂಗಳೂರು: ಮುಂದಿನ ಮಾರ್ಚ್ ವೇಳೆಗೆ ಸರ್ಕಾರಕ್ಕೆ ರಾಜ್ಯ ಶಿಕ್ಷಣ ನೀತಿ ವರದಿ ಸಲ್ಲಿಸಲಾಗುವುದು ಎಂದು ರಾಜ್ಯ ಶಿಕ್ಷಣ ನೀತಿ ರಚನಾ ಸಮಿತಿ ಮುಖ್ಯಸ್ಥ ಪ್ರೊ. ಸುಖದೇವ್ ಥೋರಟ್ ತಿಳಿಸಿದ್ದಾರೆ.
ಶಿಕ್ಷಣ ನೀತಿ ಕುರಿತಾಗಿ ಉನ್ನತ ಶಿಕ್ಷಣ ಪರಿಷತ್ ನಲ್ಲಿ ಎರಡು ದಿನಗಳ ಕಾಲ ನಡೆದ ಪ್ರಥಮ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಾಲಿ ಶಿಕ್ಷಣ ವ್ಯವಸ್ಥೆಯಲ್ಲಿ ತುರ್ತಾಗಿ ಆಗಬೇಕಾದ ಬದಲಾವಣೆ ಮತ್ತು ಭವಿಷ್ಯದಲ್ಲಿ ಶಿಕ್ಷಣ ವ್ಯವಸ್ಥೆ ಹೇಗಿರಬೇಕೆಂಬುದರ ಕುರಿತಾಗಿ ಸಮಗ್ರ ಮಾಹಿತಿ ಒಳಗೊಂಡ ಕರ್ನಾಟಕ ರಾಜ್ಯ ಶಿಕ್ಷಣ ನೀತಿಯನ್ನು ಮುಂದಿನ ಮಾರ್ಚ್ ಒಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಸರ್ಕಾರ ನೀಡಿದ ಕಾಲಮಿತಿಯೊಳಗೆ ವರದಿ ಸಲ್ಲಿಸಲು ಪ್ರಯತ್ನಿಸುತ್ತೇವೆ. ಉನ್ನತ ಶಿಕ್ಷಣ ಮತ್ತು ಶಾಲಾ ಶಿಕ್ಷಣ ವ್ಯವಸ್ಥೆ ಬಗ್ಗೆ ಅಧ್ಯಯನ, ಸಂಶೋಧನೆ ಕೈಗೊಂಡು ಸಮಸ್ಯೆಗಳು, ಕೊರತೆಗಳು, ಭವಿಷ್ಯದಲ್ಲಿ ಎದುರಾಗುವ ವಿಷಯಗಳ ಬಗ್ಗೆ ಚರ್ಚಿಸಿ ಪರಿಹಾರ ಸೂಚಿಸುತ್ತೇವೆ ಎಂದು ತಿಳಿಸಿದ್ದಾರೆ.